ಸಂಗ್ರಹ ಚಿತ್ರ 
ರಾಜ್ಯ

ಫೆಬ್ರವರಿ 12-14ರ ವರೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ; ಸಚಿವ ಸಂಪುಟ ಸಭೆ ಅನುಮೋದನೆ

ಲೋಕಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಮೊದಲ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ 2025ರ ಫೆ.25 ರಿಂದ 14ರ ವರೆಗೆ ನಡೆಯಲಿರುವ ಜಾಗತಿಕ ಸಮಾವೇಶಕ್ಕೆ ಹೆಚ್ಚಿನ ಅನುದಾನ ನೀಡಲು ಸಮ್ಮತಿ ನೀಡಲಾಗಿದೆ.

ಬೆಂಗಳೂರು: ಲೋಕಸಭೆ ಚುನಾವಣೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಮೊದಲ ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ 2025ರ ಫೆ.25 ರಿಂದ 14ರ ವರೆಗೆ ನಡೆಯಲಿರುವ ಜಾಗತಿಕ ಸಮಾವೇಶಕ್ಕೆ ಹೆಚ್ಚಿನ ಅನುದಾನ ನೀಡಲು ಸಮ್ಮತಿ ನೀಡಲಾಗಿದೆ.

ಸಂಪುಟ ಸಭೆ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು, ವಾಣಿಜ್ಯ ಮತ್ತು ಕೈಗಾರಿಕೆಯಡಿ ಇನ್ವೆಸ್ಟ್ ಕರ್ನಾಟಕ 2025 ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಅರಮನೆ ಮೈದಾನದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. 2025 ರ ಫೆ.12 ರಿಂದ ಫೆ.14ರ ವರೆಗೆ ಆಯೋಜನೆ ಮಾಡಲು 75 ಕೋಟಿ ಒದಗಿಸಿದ್ದು, ಹೆಚ್ಚುವರಿಯಾಗಿ 15 ಕೋಟಿ ಒದಗಿಸಲು ಇಂದಿನ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಬಂಡವಾಳ ಹೂಡಿಕೆ ಆಕರ್ಷಣೆಗೆ ನಾಲೆಡ್ಜ್ ಪಾರ್ಟನರ್ ಆಯ್ಕೆ ಕುರಿತು ಕರೆದ ಟೆಂಡರ್​ನಲ್ಲಿ 21 ಕೋಟಿ ರೂ. ಟೆಂಡರ್ ಕೋಟ್ ಮಾಡಿದ್ದ ಬಾಸ್ಟನ್ ಕನ್ಸ್ಟ್ರಕ್ಷನ್ ಇಂಡಿಯಾ ಕಂಪನಿಯವರಿಗೆ ಟೆಂಡರ್ ಕೊಡಲಾಗಿದೆ. ಒಂದೇ ಟೆಂಡರ್ ಬಂದಿದ್ದ ಕಾರಣಕ್ಕೆ ಅವರಿಗೆ ಟೆಂಡರ್ ನೀಡಲಾಗಿದೆ ಎಂದು ಹೇಳಿದರು.

ಹಿಂದಿನ ಸಚಿವ ಸಂಪುಟದಲ್ಲಿ 147 ಟೆಂಡರ್​ಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಿದ್ದು, ಇವುಗಳಲ್ಲಿ ಎಷ್ಟು ಟೆಂಡರ್ ಕರೆದು ಕೆಲಸ ಪ್ರಾರಂಭ ಮಾಡಲಾಗಿದೆ ಎನ್ನುವ ಅವಲೋಕನ ನಡೆಸಲಾಯಿತು. ಇದರಲ್ಲಿ 94 ಪ್ರಸ್ತಾವಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. 19 ಟೆಂಡರ್ ಪರಿಶೀಲನೆಯಲ್ಲಿವೆ. 18 ಟೆಂಡರ್​ಗಳಿಗೆ ಕಾರ್ಯಾದೇಶ ನೀಡಲಾಗಿದೆ. 7 ಟೆಂಡರ್​ ಕಾಮಗಾರಿ ಮುಕ್ತಾಯಗೊಂಡಿದೆ. 53 ಟೆಂಡರ್​​ ಕರೆಯಲು ಬಾಕಿ ಇವೆ, ಸಂಪುಟ ಇವುಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಅನುಮೋದನೆ ಕೊಟ್ಟಿರುವುದಕ್ಕೆಲ್ಲಾ ಟೆಂಡರ್ ಕರೆದು ಕೆಲಸ ಆರಂಭಿಸಲು ಸಿಎಂ ಸೂಚನೆ ನೀಡಿದರು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಡಿ ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ವಾಹನ ಚಾಲಕರ ವಿಲೀನ ಕುರಿತು ಕೆಎಟಿ ತೀರ್ಪಿನಂತೆ ಇಬ್ಬರು ಅಧಿಕಾರಿಗಳ ಹುದ್ದೆ ವಿಲೀನಗೊಳಿಸಲು ಸಂಪುಟ ಒಪ್ಪಿದೆ. ಕಾರ್ಮಿಕ ಇಲಾಖೆಯಡಿ ವೈದ್ಯಕೀಯ ಗುತ್ತಿಗೆ ಇಲಾಖೆ ಸೇವಾ ಸಕ್ರಮಾತಿಗೆ ಚರ್ಚೆಯಾಗಿ ಮುಂದೂಡಿಕೆ ಮಾಡಲಾಗಿದೆ. ಕಾನೂನು ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಕೋರ್ಟ್ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ ಸಾರಿಗೆ ಮತ್ತು ವಾಯುವ್ಯ ಸಾರಿಗೆ ನಿಗಮಕ್ಕೆ 112 ಹೊಸ ಪೂರ್ಣ ಕವಚ ನಿರ್ಮಿತ ಬಿಎಸ್ 4 ಬಸ್​​ಗಳನ್ನು 46.48 ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ ನೀಡಲಾಯಿತು. 62 ಹೊಸ ಬಸ್ ಕಲ್ಯಾಣ ಕರ್ನಾಟಕ್ಕೆ ಮತ್ತು 50 ಬಸ್ ವಾಯುವ್ಯ ಸಾರಿಗೆಗೆ ನೀಡಲಾಗುತ್ತದೆ ಎಂದರು. ಜೊತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಕೋಟಿ ಅಂದಾಜು ವೆಚ್ಚದಲ್ಲಿ ನೂತನ ನ್ಯಾಯಾಲಯ ನಿರ್ಮಿಸುವ ಯೋಜನೆಗೂ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕೆಜಿಎಫ್ ಸುತ್ತಮುತ್ತ ಪ್ರದೇಶದಲ್ಲೂ ಲಭ್ಯವಿರುವ ಟೇಲಿಂಗ್​​ನಲ್ಲಿ ಗಣಿ ಚಟುವಟಿಕೆ ಕೈಗೊಳ್ಳುವ ಬಗ್ಗೆ ತಾಂತ್ರಿಕ ವಿವರ ಬೇಕಿರುವ ಕಾರಣಕ್ಕೆ ವಿಷಯದಲ್ಲಿ ಯಾವ ನಿರ್ಧಾರ ಕೈಗೊಳ್ಳದೆ ಮುಂದಿನ ಸಂಪುಟಕ್ಕೆ ಮುಂದೂಡಲಾಗಿದೆ. ಕಾನೂನು ಇಲಾಖೆಯ ಕಾನೂನು ನೀತಿ ಬಗ್ಗೆ ಪ್ರಸ್ತಾವನೆ ಬಂದಿತ್ತು, ಕೆಲ ಬದಲಾವಣೆ ಕಾರಣಕ್ಕೆ ಮುಂದೂಡಿಕೆ ಮಾಡಲಾಯಿತು ಎಂದು ತಿಳಿಸಿದರು.

ಜಾತಿ ಜನಗಣತಿ ವಿಷಯ ಈ ಬಾರಿಯ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ. ಏಳನೇ ವೇತನ ಆಯೋಗದ ಕುರಿತು ಚರ್ಚೆಗೆ ಬಂದಿತು. ಆದರೆ, ಯಾವುದೇ ನಿರ್ಣಯ ಕೈಗೊಂಡಿಲ್ಲ, ಅದು ಅಧಿಕೃತ ಪ್ರಸ್ತಾವನೆಯಾಗಿರಲಿಲ್ಲ, ಅಧಿವೇಶನ ನಡೆಸಬೇಕು ಎನ್ನುವ ಅಭಿಪ್ರಾಯ ಬಂದಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಹೆಚ್​ ಕೆ ಪಾಟೀಲ್​ ಮಾಹಿತಿ ನೀಡಿದರು.

ಗ್ಯಾರಂಟಿ ಯೋಜನೆ ಕುರಿತು ಚರ್ಚೆಯಾಗಿಲ್ಲ, ವಾಲ್ಮೀಕಿ ನಿಗಮ ಹಗರಣ ವಿಚಾರದಲ್ಲಿ ನಾಗೇಂದ್ರ ವಿಚಾರ ಚರ್ಚೆಗೆ ಬಂದಿಲ್ಲ. ಬಿಎಸ್​ವೈ ಬಂಧನ ಸಿದ್ಧತೆ ವಿಷಯವೂ ಪ್ರಸ್ತಾಪ ಆಗಿಲ್ಲ, ಮೂರು ತಿಂಗಳ ನಂತರ ಸಂಪುಟ ಸದಸ್ಯರು ಸೇರಿದ್ದೆವು. ವಿಸ್ತೃತವಾದ ಚರ್ಚೆ ಮಾಡಿದೆವು. ಆಡಳಿತವನ್ನು ಹೆಚ್ಚು ಸುಧಾರಿತವಾಗಿ ಮಾಡಬೇಕು, ರಾಜ್ಯದ ಆಡಳಿತವನ್ನು ಹೆಚ್ಚು ವೇಗ, ಜನಸ್ನೇಹಿ, ಜನಪರ ಮಾಡಬೇಕು. ವಿಳಂಬವಾಗುವುದನ್ನು ನಿರ್ಲಕ್ಷಿಸಬಾರದು. ವಿಳಂಬವಾಗದಂತೆ ಕೆಲಸವಾಗಬೇಕು, ಆಡಳಿತವನ್ನು ಮತ್ತಷ್ಟು ಉತ್ತಮಗೊಳಿಸಲು ಬೇಕಾದ ಕ್ರಮದ ಕುರಿತು ಸಿಎಂ ನಿರ್ದೇಶನ ಮತ್ತು ಮಾರ್ಗದರ್ಶನ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಸಿಎಸ್​​ಗೆ ಕೆಲ ಸಲಹೆ ನೀಡಲಾಯಿತು, ಜನತಾದರ್ಶನ ಅಹವಾಲು ತಕ್ಷಣ ಗಂಭೀರವಾಗಿ ಪರಿಗಣಿಸಿ ಕಾರ್ಯ ಮಾಡಬೇಕು ಎನ್ನುವ ಸೂಚನೆ ನೀಡಲಾಯಿತು ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT