ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ‘ನಮ್ಮ ಬೆಂಗಳೂರು ನಮ್ಮ ಕೊಡುಗೆ’ ಯೋಜನೆಯಡಿಯಲ್ಲಿ ಸಿಎಸ್‌ಆರ್ ನೀತಿ ಹಾಗೂ ದತ್ತು ಅಡಿಯಲ್ಲಿ ಉದ್ಯಾನ, ರಸ್ತೆ ವಿಭಜಕ ಮತ್ತು ವೃತ್ತಗಳನ್ನು ಆಸಕ್ತ ಖಾಸಗಿ ವ್ಯಕ್ತಿಗಳು ಅಥವಾ ಸಂಘ-ಸಂಸ್ಥೆಗಳಿಗೆ ದತ್ತು ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ 1,270 ಉದ್ಯಾನಗಳಿವೆ. ಇವುಗಳನ್ನು ಪಾಲಿಕೆ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದ್ದು, ವೃತ್ತ ಮತ್ತು ಮೀಡಿಯನ್ಸ್‌ಗಳನ್ನು ಕೂಡ ನಿರ್ವಹಿಸಲಾಗುತ್ತಿದೆ. ಇತ್ತೀಚೆಗೆ ಹಲವು ನಾಗರಿಕರ ಸಂಘಟನೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಪಾಲಿಕೆಯನ್ನು ಸಂರ್ಪಕಿಸಿ ದತ್ತು ಸ್ವೀಕರಿಸಲು ಆಸಕ್ತಿ ವ್ಯಕ್ತಪಡಿಸಿದ್ದವು.
ಇಂತಹ ಸಂಸ್ಥೆಗಳಿಗೆ ಸಿಐಪಿಸಿ 2024, ಸಿಎಸ್‌ಆರ್ ಅಡಿಯಲ್ಲಿ ಹಾಗೂ ನಮ್ಮ ಬೆಂಗಳೂರು– ನನ್ನ ಕೊಡುಗೆ ಯೋಜನೆ ಅಡಿಯಲ್ಲಿ ದತ್ತು ಪಡೆಯಲು ಒಪ್ಪಿಗೆ ನೀಡಲಾಗಿದೆ.
ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಜೂ.16ರಿಂದ ಪಾಲಿಕೆಯ ಅಧಿಕೃತ ವೆಬ್ಸೈಟ್ ಮೂಲಕ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ದತ್ತು ಪಡೆಯಲು ಷರತ್ತುಗಳ ವಿವರವನ್ನು ವೆಬ್ಸೈಟ್‌ನಲ್ಲಿಯೇ ವೀಕ್ಷಿಸಬಹುದಾಗಿದೆ. ಜೂ.29ರ ಸಂಜೆ 5 ಗಂಟೆಯೊಳಗೆ ಉಪ ನಿರ್ದೇಶಕರು, ತೋಟಗಾರಿಕೆ ಕಚೇರಿ, ಅನೆಕ್ಸ್- 3 ಕಟ್ಟಡ ನೆಲಮಹಡಿ, ಕೊಠಡಿ ಸಂಖ್ಯೆ 9, ಬಿಬಿಎಂಪಿ ಕೇಂದ್ರ ಕಚೇರಿಗೆ ಭೇಟಿ ನೀಡಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂ: 9535015189ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಪಾಲಿಕೆಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ತಿಳಿಸಿದ್ದಾರೆ.