ಸಿಎಂ ಸಿದ್ದರಾಮಯ್ಯ 
ರಾಜ್ಯ

ರಾಜ್ಯದಲ್ಲಿ ಅರಣ್ಯ ಪ್ರದೇಶ ಹೆಚ್ಚಿಸಲು ಸಹಾಯ ಮಾಡಿ: ಜನತೆಗೆ ಸಿಎಂ ಸಿದ್ದರಾಮಯ್ಯ ಮನವಿ

ರಾಜ್ಯದಲ್ಲಿ ಹಸಿರು‌ ಬೆಳೆಸುವ ಕಾರ್ಯಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಈ ಕೆಲಸದಲ್ಲಿ ಸಾರ್ವಜನಿಕರೂ ಕೈ ಜೋಡಿಸಬೇಕು. ಒಬ್ಬರು ಕನಿಷ್ಠ ಎರಡು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ಮೈಸೂರು: ರಾಜ್ಯದಲ್ಲಿ ಹಸಿರು‌ ಬೆಳೆಸುವ ಕಾರ್ಯಕ್ಕೆ ಸರ್ಕಾರ ಆದ್ಯತೆ ನೀಡಿದ್ದು, ಈ ಕೆಲಸದಲ್ಲಿ ಸಾರ್ವಜನಿಕರೂ ಕೈ ಜೋಡಿಸಬೇಕು. ಒಬ್ಬರು ಕನಿಷ್ಠ ಎರಡು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ನಗರದ ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶನಿವಾರ ರಾಜೀವ್‌ ಸ್ನೇಹ ಬಳಗ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲಕ್ಷ ವೃಕ್ಷ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಶೇ.19ರಷ್ಟು ಅರಣ್ಯವಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಶೇ.5ಕ್ಕಿಂತ ಕಡಿಮೆ ಅರಣ್ಯ ಪ್ರದೇಶವಿದೆ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಮನಹರಿಸಬೇಕಿದೆ. ಪ್ರಕೃತಿಯು ಜನರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತದೆ. ಭವಿಷ್ಯದ ಪೀಳಿಗೆಗೂ ಕೂಡ ಪ್ರತಿಯೊಬ್ಬರೂ ಎರಡು ಸಸಿಗಳನ್ನು ನೆಡಬೇಕು. ಅರಣ್ಯ ಪ್ರದೇಶದಿಂದ ಜನರಿಗೆ ಉತ್ತಮ ಮಳೆ ಹಾಗೂ ಆರೋಗ್ಯ ಸಿಗಲಿದೆ, ಆದರೆ, ಹೆಚ್ಚಿದ ಜನಸಂಖ್ಯೆಗೆ ಅನುಗುಣವಾಗಿ ಅರಣ್ಯವನ್ನು ಹೆಚ್ಚಿಸುವ ಬದಲು ಅರಣ್ಯ ನಾಶವಾಗುತ್ತಿರುವುದು ವಿಷಾದಕರ ಸಂಗತಿ.

ಇದೇ ವೇಳೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದ್ದನ್ನು ಸ್ಮರಿಸಿದ ಅವರು, ಇದಕ್ಕೆ ಅರಣ್ಯನಾಶವೂ ಒಂದು ಕಾರಣ ಎಂದು ಹೇಳಿದರು.

ಪ್ರತಿ ವರ್ಷ ಲಕ್ಷಗಟ್ಟಲೆ ಸಸಿಗಳನ್ನು ನೆಡಲಾಗುತ್ತಿದ್ದು, ನಂತರದ ಹಂತಗಳಲ್ಲಿ ಸಸಿಗಳನ್ನು ಪೋಷಣೆ ಮಾಡಲಾಗುತ್ತಿಲ್ಲ. ಸರ್ಕಾರ ಕಳೆದ ವರ್ಷ 5 ಕೋಟಿ ಸಸಿ‌ ನೆಟ್ಟಿತ್ತು. ಅದರಲ್ಲಿ ಶೇ 80 ರಷ್ಟು ಆದರೂ ಉಳಿಯಬೇಕು. ಆದರೆ, ಅಷ್ಟು ಕಾಣಿಸುತ್ತಿಲ್ಲ.‌ ಅಧಿಕಾರಿಗಳು ನೆಟ್ಟ ಸಸಿ ಬೆಳೆಸಲು ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ, ಮುಂದಿನ ಮೂರು ತಿಂಗಳಲ್ಲಿ ಸಸಿಗಳನ್ನು ನೆಡುವ ಮತ್ತು ಅವುಗಳ ನಿರ್ವಹಣೆಯ ಬಗ್ಗೆ ಸರ್ಕಾರದಿಂದ ವರದಿ ಕೇಳಲಾಗುವುದು ಎಂದು ಹೇಳಿದರು.

ಮೈಸೂರಿನಲ್ಲಿ ಕಳೆದ ವರ್ಷ 20 ಲಕ್ಷ ಸಸಿ ನೆಟ್ಟಿದ್ದೇವೆ. ಈ ಬಾರಿ ಮುಂಗಾರು ಬೇಗ ಬಂದಿದೆ ಈ ಬಾರಿಯೂ 11 ಲಕ್ಷ ಸಸಿ ನೆಡುವ ಯೋಜನೆ ಇದೆ. ಸಸಿ ನೆಡುವುದಲ್ಲ ಅವುಗಳ ಉಳಿಸುವ ಕೆಲಸ ಆಗಬೇಕು. ಐದು ವರ್ಷಗಳಲ್ಲಿ 25 ಕೋಟಿ ಸಸಿ ನೆಡುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.

100 ಕೋಟಿ ಹೆಚ್ಚುವರಿ ಅನುದಾನ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿರುವುದರಿಂದ 25 ಲಕ್ಷ ಸಸಿಗಳನ್ನು ನೆಡಲು ಸಿದ್ಧತೆ ನಡೆಸಲಾಗಿದೆ. ಮುಖ್ಯಮಂತ್ರಿಯವರು ಮೈಸೂರು ನಗರವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಘೋಷಿಸಿದ್ದಾರೆ. ನಮ್ಮ ಪರಿಸರ ಇಲಾಖೆ ಪ್ಲಾಸ್ಟಿಕ್ ಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದೆ. ಇದಕ್ಕೆ ಜನರೂ ಕೈಜೋಡಿಸಬೇಕು ಮತ್ತು ತಾವು ಏಕ ಬಳಕೆ ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ಶಪತ ಮಾಡಬೇಕು ಎಂದು ಕರೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

SCROLL FOR NEXT