ಚಿತ್ರದುರ್ಗ: ಚಿತ್ರದುರ್ಗದ ವಿಆರ್‌ಎಸ್ ಬಡಾವಣೆಯ ರೇಣುಕಾಸ್ವಾಮಿ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದ ಬಿಜೆಪಿ ನಿಯೋಗ ಮಂಗಳವಾರ ಭೇಟಿ ನೀಡಿದ್ದು, ಪಕ್ಷದ ವತಿಯಿಂದ ರೂ.2 ಲಕ್ಷ ನೆರವು ನೀಡಿ, ಮೃತ ವ್ಯಕ್ತಿಯ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ರೇಣುಕಾಸ್ವಾಮಿ ಅವರ ಹತ್ಯೆ ಅಮಾನವೀಯವಾಗಿದ್ದು, ಸುಸಂಸ್ಕೃತ ಸಮಾಜದಲ್ಲಿ ಯಾರೂ ಇದನ್ನು ಬೆಂಬಲಿಸಲು ಸಾಧ್ಯವಿಲ್ಲ, ಈ ಘಟನೆಯನ್ನು ಪ್ರತಿಯೊಬ್ಬರೂ ತೀವ್ರವಾಗಿ ಖಂಡಿಸಬೇಕು. ಈ ಹೇಯ ಹತ್ಯೆ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮೃತ ವ್ಯಕ್ತಿಯ ಪೋಷಕರು ಮತ್ತು ಹೆಂಡತಿಯನ್ನು ನೋಡಿದರೆ ನೋವಾಗುತ್ತದೆ. ಅವರಿಗೆ ಹೇಗೆ ಸಾಂತ್ವನ ಹೇಳುವುದು ಮತ್ತು ಅವರಲ್ಲಿ ಧೈರ್ಯ ತುಂಬುವುದು ಹೇಗೆ ಎಂದು ನಮಗೆ ಅರ್ಥವಾಗುತ್ತಿಲ್ಲ ಎಂದ ಹೇಳಿದರು.
ಕೊಲೆ ನಡೆದು ಇಷ್ಟು ದಿನ ಕಳೆದರೂ ಕೂಡ ಸರ್ಕಾರದ ಪರವಾಗಿ ಯಾವೊಬ್ಬ ಸಚಿವರು ಬಾರದೆ ಇರುವುದು ಖಂಡನೀಯ ಸಂಗತಿ. ಇಂತಹ ಸಂದರ್ಭದಲ್ಲಿ ಯಾವುದೇ ವ್ಯಕ್ತಿಗೆ ಆದರೂ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು. ಪರಿಹಾರ ಕೊಟ್ಟು, ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ಕೊಲೆ ಪ್ರಕರಣದಲ್ಲಿ ಎಷ್ಟೆಲ್ಲಾ ದೊಡ್ಡ ವ್ಯಕ್ತಿಗಳು. ಭಾಗಿಯಾಗಿದ್ದಾರೆ ಎಂಬುದು ಜಗಜ್ಜಾಹೀರು ಆಗಿದೆ. ಆದ್ದರಿಂದ ಸರ್ಕಾರ ಯಾರ ಮೂಲಾಜಿಗೂ ಒಳಗಾಗದೆ, ಪ್ರಮಾಣಿಕವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಅದೇ ರೀತಿ ಯಾರು ಕೂಡ ರಾಜಕೀಯ ಮಾಡಬಾರದು. ನೊಂದಂತಹ ಕುಟುಂಬಕ್ಕೆ ಎಲ್ಲಾರೂ ಸೇರಿ ನ್ಯಾಯ ವದಗಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ಗೋವಿಂದ ಕಾರಜೋಳ ಶಾಸಕ ಚಂದ್ರಪ್ಪ, ಮಾಜಿ ಶಾಸಕ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಶ್ರೀ ಕೆ.ಎಸ್.ನವೀನ್, ಬಿಜೆಪಿ ಮುಖಂಡ ಎಸ್.ಲಿಂಗಮೂರ್ತಿ, ಜಿಲ್ಲಾಧ್ಯಕ್ಷ ಶ್ರೀ ಮುರುಳಿ, ಹನುಮಂತೇಗೌಡ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.