ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ, ನಟ ಪ್ರಥಮ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ದಾಖಲಿಸಿರುವ ಅವರು, ಅಂಧಾಭಿಮಾನಿಗಳಿಂದ ನಿರಂತರ ಕರೆಗಳು ಮಾಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಅವರು ಬರೆದುಕೊಂಡಿದ್ದಾರೆ.
ಜೀವನ ಬಹಳ ದೊಡ್ಡದು;ಯಾರಿಗೋಸ್ಕರವೋ ನೀವು ಅದನ್ನು ಹಾಳು ಮಾಡಿಕೊಳ್ಳಬೇಡಿ. ನಾನು ತುಂಬಾ ಶಾಂತಿಯಿಂದಲೇ ಇದ್ದೆ. ನೀವು ಅತಿಯಾಗಿ ನಮ್ಮ ʼಕರ್ನಾಟಕದ ಆಳಿಯʼ ತಂಡದ ಆಫೀಸ್ ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೆ ಬಂದಿದ್ದೀರಾ. ಇನ್ಮೇಲೆ ನನಗೆ ಬರುವ ಕಾಲ್ ಮೆಸೇಜ್ ಅಥವಾ ಸೋಶಿಯಲ್ ಮೀಡಿಯಾ ವಾರ್ನಿಂಗ್ ಎಲ್ಲವೂ ಪೋಲೀಸರು ನೋಡಿಕೊಳ್ಳುತ್ತಾರೆ. ಬದುಕು ಸುಂದರವಾದದ್ದು. ಅಂಧಾಭಿಮಾನಿಗಳೇ ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ; ಯಾರಿಗೋಸ್ಕರವೋ ಹಾಳುಮಾಡಿಕೊಳ್ಳಬೇಡಿ ಕನ್ನಡಕ್ಕಾಗಿ, ಕಾವೇರಿಗಾಗಿ,ಸಂಸ್ಕೃತಿ ಉಳಿಸೋಕೆ ಬೇಕಾದ್ರೆ ಜೈಲಿಗೆ ಹೋಗಿ ಯಾರಿಗೋಸ್ಕರವೋ ಲೈಫ್ ಹಾಳುಮಾಡಿಕೊಳ್ಳಬೇಡಿ ಎಂದು ಬರೆದುಕೊಂಡಿದ್ದಾರೆ.
ಪ್ರಥಮ್ ಇತ್ತೀಚೆಗೆ ರೇಣುಕಾಸ್ವಾಮಿ ಪ್ರಕರಣ ಸಂಬಂಧ ಮಾತನಾಡಿದ್ದರು. ಇದು ದರ್ಶನ್ ಅವರ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಪ್ರಥಮ್ ಅವರಿಗೆ ದರ್ಶನ್ ಅಭಿಮಾನಿಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿದೆ ಎನ್ನಲಾಗಿದೆ.