ಬೆಂಗಳೂರು: ಸಾಹಿತಿಗಳೂ ರಾಜಕಾರಣಿಗಳೇ ಆಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ವಿವಿಧ ಅಕಾಡೆಮಿಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯನ್ನು ಸಮರ್ಥಿಸಿಕೊಂಡರು.
ಕೆಲ ದಿನಗಳ ಹಿಂದೆ ಕೆಪಿಸಿಸಿ ಕಚೇರಿಗೆ ಸಾಹಿತ್ಯ, ಸಂಸ್ಕೃತಿ ಮತ್ತು ಇತರ ಅಕಾಡೆಮಿಗಳ ಅಧ್ಯಕ್ಷರ ಮತ್ತು ಪದಾಧಿಕಾರಿಗಳನ್ನು ಕರೆಸಿಕೊಂಡ ವಿಚಾರವಾಗಿ ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತವಾಗುತ್ತಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದಾಗ, ಅವರು ತಮ್ಮ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು.
‘ಅಕಾಡೆಮಿ ಅಧ್ಯಕ್ಷರ ಸಭೆ ನಾನೇ ಕರೆದಿದ್ದು. ಅದರಲ್ಲಿ ತಪ್ಪೇನಿದೆ. ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದು ಸರಿಯಲ್ಲ ಅಂತ ನಿಮಗೆ ಅನ್ನಿಸಿರಬಹುದು. ಇದು ಸರ್ಕಾರದ ನೇಮಕ. ಹೀಗಾಗಿ ಎಲ್ಲಿ ಬೇಕಾದರೂ ಕರೆಸಿಕೊಳ್ಳಬಹುದು. ಎಲ್ಲಿ ಬೇಕಾದರೂ ಸಭೆ ಮಾಡಬಹುದು. ಅವರು (ಸಾಹಿತಿ–ಕಲಾವಿದರು) ರಾಜಕಾರಣಿಗಳೇ ಆಗಿದ್ದಾರೆ ಮತ್ತು ಅವರು ರಾಜಕೀಯಕ್ಕೆ ಪ್ರವೇಶಿಸಬಾರದು ಅನ್ನುವುದೇನಿಲ್ಲ’ ಎಂದು ಹೇಳಿದರು.
ಕಾಂಗ್ರೆಸ್ ಕಚೇರಿಯೊಳಗೆ ಸಾಹಿತ್ಯ, ಸಂಸ್ಕೃತಿ ಮತ್ತು ಇತರ ಅಕಾಡೆಮಿಗಳ ಅಧ್ಯಕ್ಷರ ಮತ್ತು ಪದಾಧಿಕಾರಿಗಳನ್ನು ಕರೆಸಿ ಸಭೆ ನಡೆಸಿದ್ದನ್ನು ಬಿಜೆಪಿ ಆಕ್ಷೇಪಿಸಿತ್ತು.
ಅಕಾಡೆಮಿಗಳು ಸ್ವತಂತ್ರ ಸಂಸ್ಥೆಗಳಲ್ಲ. ಎಲ್ಲರೂ ರಾಜಕಾರಣಿಗಳು. ತಮ್ಮದೇ ಆದ ಸಿದ್ಧಾಂತಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ. ಅವರು ಅದರ ಬಗ್ಗೆ ಮಾತನಾಡದೇ ಇರಬಹುದು. ನಾನು ಅವರನ್ನು (ಸಭೆಗೆ) ಕರೆದಾಗ, ಸಿದ್ಧರಿದ್ದವರು ಬಂದರು, ಕೆಲವರು ಬರಲಿಲ್ಲ ಎಂದು ಅವರು ಹೇಳಿದರು.