ಬೆಂಗಳೂರು: ನಗರದ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾಲಯದಲ್ಲಿ 2024ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಜೊತೆಗೆ "ವೈಯಕ್ತಿಕ ಮತ್ತು ಸಮಾಜಕ್ಕಾಗಿ ಯೋಗ" ಎಂಬ ವಿಷಯದೊಂದಿಗೆ “ಬಾಹ್ಯಾಕಾಶಕ್ಕಾಗಿ ಯೋಗ" ಕುರಿತಾದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಇದು ಗಗನಯಾತ್ರಿಗಳು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳ ತಜ್ಞರ ಒಮ್ಮುಖ ಪ್ರಯತ್ನಗಳ ಮೇಲೆ ಕೇಂದ್ರೀಕೃತವಾಗಿತ್ತು.
ಎಸ್-ವ್ಯಾಸ ವಿಶ್ವವಿದ್ಯಾಲಯ ಸಂಸ್ಥಾಪಕರಾದ ಡಾ. ಎಚ್.ಆರ್ ನಾಗೇಂದ್ರ ಮಾತನಾಡಿ, ನಾಸಾದಿಂದ ವ್ಯಾಸ (ಎಸ್-ವ್ಯಾಸ) ಬೆಳವಣಿಗೆಯವರೆಗಿನ ಪ್ರಯಾಣವನ್ನು ವಿವರಿಸಿದರು. ದೆಹಲಿಯ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಕೇಂದ್ರೀಯ ಮಂಡಳಿಯ ನಿರ್ದೇಶಕ ಡಾ. ರಾಘವೇಂದ್ರ ರಾವ್, ಎಸ್-ವ್ಯಾಸ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಆರ್. ರಾಮಕೃಷ್ಣನ್ ಅವರು ವಿಷಯ ಮಂಡಿಸಿದರು.
ಬೆಂಗಳೂರಿನ ನಿಮ್ಹಾನ್ಸ್‌ನ ನ್ಯೂರೋಫಿಸಿಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಟಿ.ಎನ್. ಸತ್ಯಪ್ರಭಾ ಅವರ ಅಧ್ಯಕ್ಷತೆಯಲ್ಲಿ ಇಸ್ರೋದ ಉಪನಿರ್ದೇಶಕರಾದ ಡಾ.ಸಿ ಗೀತೈಕೃಷ್ಣನ್ ಅವರು "ಗಗನಯಾನ - ಮಿಷನ್ ಮತ್ತು ಸಿಬ್ಬಂದಿ ಸುರಕ್ಷತೆ" ಕುರಿತು ವಿಷಯ ಮಂಡಿಸಿದರು. ಡಾ. ಕೆ.ಕೆ ದೀಪಕ್ ಅವರು ಬಾಹ್ಯಾಕಾಶ ಸಂಶೋಧನೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಎಸ್ ವ್ಯಾಸ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎನ್.ಕೆ. ಮಂಜುನಾಥ್ ನಿಮ್ಹಾನ್ಸ್ ನ ಮನಃಶಾಸ್ತ್ರ ಪ್ರೊ. ಡಾ. ಶಿವರಾಮ ವಾರಂಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.