ಬೆಂಗಳೂರು: ಬೆಂಗಳೂರಿನ ಇಬ್ಬರು ಯಾತ್ರಾರ್ಥಿಗಳ ಸಾವಿಗೆ ಸೌದಿ ಅರೇಬಿಯಾ ಸರ್ಕಾರದ ನಿರ್ದೇಶನವನ್ನು ಪಾಲಿಸದಿರುವುದೇ ಕಾರಣ ಎಂದು ಕರ್ನಾಟಕ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಜ್ ಖಾನ್ ಅವರು ಗುರುವಾರ ಆರೋಪಿಸಿದ್ದಾರೆ.
ಸೌದಿ ಅರೇಬಿಯಾದ ಮುಸ್ಲಿಮರ ಧರ್ಮಕ್ಷೇತ್ರ ಮೆಕ್ಕಾದಲ್ಲಿ ತಾಪಮಾನ ಅತ್ಯಧಿಕವಾಗಿದ್ದು, ಇದರ ಪರಿಣಾಮ ಹಜ್ ಯಾತ್ರೆಗೆ ತೆರಳಿ ಸಾವನ್ನಪ್ಪಿದವರ ಸಂಖ್ಯೆ 1000 ದಾಟಿದೆ. ಈ ಪೈಕಿ ಇಬ್ಬರು ಬೆಂಗಳೂರಿಗರು ಕೂಡ ಇದ್ದಾರೆ.
ಆರ್‌ಟಿ ನಗರದ ರುಕ್ಸಾನಾ ಕೌಸರ್ (69) ಮತ್ತು ಫ್ರೇಸರ್ ಟೌನ್‌ನ ಮೊಹಮ್ಮದ್ ಇಲ್ಯಾಸ್ (54) ತೀವ್ರ ತಾಪಮಾನದಿಂದಾಗಿ ಮೃತಪಟ್ಟಿದ್ದಾರೆ.
ಮಿನಾ ಕಣಿವೆಯಲ್ಲಿ ಯಾತ್ರಾರ್ಥಿಗಳು ರಾಮಿ ಅಲ್-ಜಮಾರತ್ ಆಚರಣೆಯಲ್ಲಿ ಭಾಗವಹಿಸುತ್ತಿದ್ದಾಗ ಇಬ್ಬರೂ ಮೃತಪಟ್ಟಿದ್ದಾರೆ. ಇಬ್ಬರೂ ಯಾತ್ರಾರ್ಥಿಗಳನ್ನು ಮೆಕ್ಕಾದಲ್ಲಿ ಸಮಾಧಿ ಮಾಡಲಾಗಿದೆ. ಅವರ ಕುಟುಂಬಗಳಿಗೂ ಮಾಹಿತಿ ನೀಡಲಾಗದೆ.
ಮೃತರು ಪ್ರಾರ್ಥನೆಯನ್ನು ಶೀಘ್ರಗತಿಯಲ್ಲಿ ಮುಗಿಸಿ ಹಿಂತಿರುಗಲು ಪ್ರಯತ್ನಿಸಿರಬಹುದು, ಆದರೆ ನಿರ್ಜಲೀಕರಣ ಮತ್ತು ಪಾರ್ಶ್ವವಾಯು ಆಗಿ ಮೃತಪಟ್ಟಿದ್ದಾರೆ. ಜನರನ್ನು ರಕ್ಷಿಸಲು ಬಂದ ಪೊಲೀಸರು ಮತ್ತು ಸಿಬ್ಬಂದಿ ಕೂಡ ಆರೋಗ್ಯದಲ್ಲಿ ತೊಂದರೆ ಅನುಭವಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರ್ನಾಟಕದ ಹಜ್ ಯಾತ್ರಾರ್ಥಿಗಳು ರಿಟರ್ನ್ ಫ್ಲೈಟ್ ಹತ್ತುವವರೆಗೆ ಸೌದಿ ಸರ್ಕಾರದ ನಿರ್ದೇಶನಗಳನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.