ಬೆಂಗಳೂರು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಸಂಬಂಧಿಸಿದ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯ (KIOCL) ಕಡತಕ್ಕೆ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಒಪ್ಪಿಗೆ ನೀಡಿ, ಕಡತಕ್ಕೆ ಸಹಿ ಹಾಕಿರುವುದಕ್ಕೆ ರಾಜ್ಯ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿ ನಿರಾಕರಣೆ ಮಾಡಿದ್ದು, ಉದ್ದೇಶಿತ ಗಣಿ ಪ್ರದೇಶ ಸ್ವಾಮಿಮಲೈ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದೆ. ಇಲ್ಲಿ ಗಣಿಗಾರಿಕೆಯಿಂದ 99,330 ಮರಗಳು ಕಡಿದು ನಾಶವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ದಟ್ಟ ಕಾಡು ನಾಶವಾದರೆ ಮಣ್ಣಿನ ಸವಕಳಿ ಪ್ರವಾಹದ ಸಮಸ್ಯೆ ಕಾಡಲಿದೆ. ಇನ್ನು ಅರಣ್ಯ ಪ್ರದೇಶದಲ್ಲಿ ಹೊಸ ಗಣಿ ಗುತ್ತಿಗೆಗೆ ಅನುಮತಿ ನೀಡದಂತೆ ಈ ಹಿಂದೆ, ಅಂದರೆ 2016ರ ಮಾರ್ಚ್ 28ರಂದು ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ನಿರ್ಣಯಿಸಲಾಗಿದೆ. ಗಣಿಗಾರಿಕೆ ನಡೆಯಲಿರುವ ಜಾಗ ದರೋಜಿ ಕರಡಿ ಧಾಮದಿಂದ ಕೇವಲ 19 ಕಿಲೋಮೀಟರ್ ದೂರದಲ್ಲಿದೆ. ಶ್ರೀಗಂಧ, ತೇಗ, ಬಿದಿರು, ದಿಂಡಾಲ, ಹೊನ್ನೆ, ರಕ್ತ ಭೂತಾಳ, ಅಂಟುವಾಳ, ಬಿಲ್ವ, ಕಲ್ಲು, ಮಾವು, ಅರಳಿ, ಕಾಡುಬನ್ನಿ ಸೇರಿದಂತೆ ಸಾವಿರಾರು ಮರಗಳಿಗೆ ಕುತ್ತು ಬರಲಿದೆ.
ಹೀಗಾಗಿ ಗಣಿಗಾರಿಕೆಗೆ ಅನುಮತಿ ನೀಡದಂತೆ ಸಾಮಾಜಿಕ ಹೋರಾಟಗಾರರು ಪರಿಸರ ಹೋರಾಟಗಾರರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಗಣಿಗಾರಿಕೆ ನಡೆಸಲು ಹೊರಟ ಕಂಪನಿಯ ವಿರುದ್ಧವು ಸಾಕಷ್ಟು ಲೋಪದೋಷಗಳ ಆರೋಪವಿದೆ. ಅರಣ್ಯ ನಿಯಮಗಳನ್ನ ಈ ಹಿಂದೆ ಉಲ್ಲಂಘನೆ ಮಾಡಿ ಈ ಕಂಪನಿ ಇಕ್ಕಟ್ಟಿಗೆ ಸಿಲುಕಿತ್ತು. ಈ ಎಲ್ಲಾ ದೃಷ್ಟಿಯಿಂದ ಸದ್ಯ ಅರಣ್ಯ ತಿರುವಳಿ ಗುತ್ತಿಗೆಗೆ ಸಹಿ ಹಾಕದಂತೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಇಲಾಖೆಯ ಅಧಿಕಾರಿಯೊಬ್ಬರು ಮಾತನಾಡಿ, ಕುದುರೆಮುಖದಲ್ಲಿ ಕೆಐಒಸಿಎಲ್ ಗಣಿಗಾರಿಕೆ ನಡೆಸುತ್ತಿದ್ದಾಗ ಹಲವು ಅಕ್ರಮಗಳು ನಡೆದಿವೆ. ಲಕ್ಯಾ ಅಣೆಕಟ್ಟಿನ ಜಲಾನಯನ ಪ್ರದೇಶದ ಎತ್ತರವನ್ನು ಒಂದು ಮೀಟರ್ ಹೆಚ್ಚಿಸಿದೆ, ಇದರಿಂದಾಗಿ ಮುಳುಗಡೆಯಾಗುವ ಅರಣ್ಯ ಪ್ರದೇಶ ಹೆಚ್ಚಾಗಿದೆ. ಅರಣ್ಯ ಅನುಮತಿ ಪಡೆಯದೆ ಮಂಗಳೂರಿಗೆ ಕಬ್ಬಿಣದ ಅದಿರು ಸಾಗಿಸಲು ಪೈಪ್‌ಗಳನ್ನು ಹಾಕಿದ್ದಾರೆ. ಗಣಿಗಾರಿಕೆ ಬಾಕಿ ಕೂಡ ಇನ್ನೂ ಮುಗಿದಿಲ್ಲ. ಆದ್ದರಿಂದ ಅರಣ್ಯ ಕಾಯ್ದೆಗೆ ಸಂಬಂಧಿಸಿದ ಅವ್ಯವಹಾರಗಳು, ಅರಣ್ಯ ತೆರವು ಮತ್ತು ಕುದುರೆಮುಖದಲ್ಲಿನ ಗಣಿಗಾರಿಕೆಯನ್ನು ತೆರವುಗೊಳಿಸದ ಹೊರತು ಸಂಡೂರಿನಲ್ಲಿ ಗಣಿಗಾರಿಕೆಗೆ ಅನುಮತಿ ನೀಡದಿರಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
2020 ರಲ್ಲಿ ಅರಣ್ಯ ಇಲಾಖೆ ಮತ್ತು ಪರಿಸರ ಸಮಿತಿಯು ಅನುಮತಿ ನಿರಾಕರಿಸಿದ್ದರೂ ದೇವಾದ್ರಿ ಬೆಟ್ಟಗಳಲ್ಲಿ ಗಣಿಗಾರಿಕೆಯನ್ನು ಹೇಗೆ ನಡೆಸಲಾಯಿತು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆಂದು ತಿಳಿಸಿದ್ದಾರೆ.