ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಕೆಎಂಎಫ್ (KMF) ಹಾಲಿನ ದರವನ್ನು ಪ್ರತಿ ಲೀಟರ್ ಗೆ 2 ರೂಪಾಯಿ ಏರಿಕೆ ಮಾಡಿದ್ದು, ನಾಳೆಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ಬೆಲೆ ಏರಿಕೆ ಬೆನ್ನಲ್ಲೇ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು ಇದಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು ಹಾಲಿನ ದರ ಏರಿಕೆ ಮಾಡುವುದು ಸರ್ಕಾರ ಅಲ್ಲ, ಕೆಎಂಎಫ್. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆ ಇದೆ. ಹಾಲಿನ ದರ ಹೆಚ್ಚಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದು, ಬೇರೆ ರಾಜ್ಯಗಳ ಪರಿಸ್ಥಿತಿ ನೋಡಿಕೊಂಡು ದರ ಹೆಚ್ಚಳ ಮಾಡ್ತಾರೆ. ಅಲ್ಲಿಗಿಂತ ಹಾಲಿನ ದರ ಕಡಿಮೆ ಇದ್ದರೆ ಜಾಸ್ತಿ ಮಾಡ್ತಾರೆ. ನನಗೆ ಗೊತ್ತಿರುವ ಪ್ರಕಾರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಕಡಿಮೆ ಇದೆ ಎಂದರು.
ಸದ್ಯ ಕೆಎಂಎಫ್‌ನ 1 ಲೀಟರ್ ಹಾಲಿಗೆ ಪ್ರಸ್ತುತ ದರ 42 ರೂಪಾಯಿ. ಇನ್ನು ಮುಂದೆ 1 ಲೀಟಲ್ ಹಾಲಿನ ಪ್ಯಾಕೆಟ್ ತೂಕ ಹೆಚ್ಚುವರಿಯಾಗಿ 50 ಎಂಎಲ್ ಸೇರ್ಪಡೆ ಮಾಡಲಾಗುತ್ತದೆ. 50 ಎಂಎಲ್ ಹಾಲಿನ 2 ರೂಪಾಯಿ 10 ಪೈಸೆ. ಅದಕ್ಕಾಗಿ 1050 ಎಂಎಲ್‌ನ ಈ ಪ್ಯಾಕೆಟ್ ಹಾಲಿನ ದರ ನಾಳೆಯಿಂದ 44 ರೂಪಾಯಿ ಆಗಿರಲಿದೆ.