ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರ ನಿರ್ಮಾಪಕ ಮತ್ತು ನಟನಿಗೆ ಬೆದರಿಕೆ ಹಾಕಿದ್ದ ದರ್ಶನ್ ಅಭಿಮಾನಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಅಭಿಮಾನಿಯನ್ನು ಚೇತನ್ ಎಂದು ಗುರುತಿಸಲಾಗಿದ್ದು, ತಮಿಳುನಾಡಿನ ಕೊಯಮತ್ತೂರಿನಿಂದ ಪೊಲೀಸರು ಬಂಧಿಸಿದ್ದಾರೆ. ಸದ್ಯ ಜೈಲು ಪಾಲಾಗಿರುವ ನಟ ದರ್ಶನ್ ಅವರ ಕಟ್ಟಾ ಅಭಿಮಾನಿಯೂ ಆದ ಮತ್ತೊಬ್ಬ ಆರೋಪಿ ನಾಗೇಶ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ನ್ಯಾಯಾಲಯದ ನಿರ್ದೇಶನದಂತೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿಗಳು ಚಿತ್ರ ನಿರ್ಮಾಪಕ ಉಮಾಪತಿ ಗೌಡ ಹಾಗೂ ಕನ್ನಡ ನಟ ಪ್ರಥಮ್ ಅವರಿಗೆ ಜೀವ ಬೆದರಿಕೆ ಹಾಕಿದ್ದರು.
ಉಮಾಪತಿ ಗೌಡ ಮತ್ತು ಪ್ರಥಮ್ ನಟನ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದರು. ದರ್ಶನ್, ಮತ್ತು ಸ್ನೇಹಿತೆ ಪವಿತ್ರಾ ಗೌಡ ಮತ್ತು ಇತರ 15 ಮಂದಿಯಿಂದ ಅಪಹರಿಸಿ ಚಿತ್ರಹಿಂಸೆಗೆ ಒಳಗಾದ ಸಂತ್ರಸ್ತ ರೇಣುಕಾಸ್ವಾಮಿಯ ಬಗ್ಗೆ ಉಮಾಪತಿ ಗೌಡ ಮತ್ತು ಪ್ರಥಮ್ ಸಹಾನುಭೂತಿ ವ್ಯಕ್ತಪಡಿಸಿದ್ದರು.
ಬಂಧಿತ ಆರೋಪಿ ಚೇತನ್ ಬೆದರಿಕೆ ಹಾಕಿರುವ ಕೃತ್ಯಕ್ಕೆ ಕ್ಷಮೆಯಾಚಿಸುವ ವಿಡಿಯೋ ಮಾಡಿ ಕಾನೂನಿಗೆ ಬದ್ಧನಾಗಿರುತ್ತೇನೆ ಎಂದು ಭರವಸೆ ನೀಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜೈಲು ಸೇರಿರುವ ನಟನ ವಿರುದ್ಧ ಮಾತನಾಡಿದ್ದಕ್ಕೆ ದರ್ಶನ್ ಅಭಿಮಾನಿಗಳು ಮಾಧ್ಯಮದವರಿಗೆ ಬೆದರಿಕೆ ಹಾಕಿದ್ದರು. ಟನನ್ನು ಟೀಕಿಸುವವರಿಗೆ ಭೀಕರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡುವ ಬೆದರಿಕೆಯ ವೀಡಿಯೊಗಳನ್ನು ಅಭಿಮಾನಿಗಳು ಬಿಡುಗಡೆ ಮಾಡುತ್ತಿದ್ದಾರೆ, ಈ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.