ಬೆಂಗಳೂರು: ಸ್ವಾಧೀನದಿಂದ ಭೂಮಿಯನ್ನು ಡಿನೋಟಿಫೈ ಮಾಡುವ ಎಲ್ಲಾ ಸರ್ಕಾರಿ ಆದೇಶಗಳು ಮತ್ತು ಅಂತಹ ಡಿನೋಟಿಫಿಕೇಶನ್‌ಗಳನ್ನು ರದ್ದುಪಡಿಸುವ ನಂತರದ ಸರ್ಕಾರಿ ಆದೇಶಗಳನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿ ಆಸ್ತಿ ದಾಖಲೆಗಳ ಭಾಗವಾಗಿ ಮಾಡಬೇಕೆಂದು ಶೀಘ್ರವೇ ಸುತ್ತೋಲೆ ಹೊರಡಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಏಕ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಸಲ್ಲಿಸಿದ್ದ ಮೇಲ್ಮನವಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ ಹುದ್ದಾರ್ ಅವರ ವಿಭಾಗೀಯ ಪೀಠ ಈ ಆದೇಶ ನೀಡಿದೆ. ತೀರ್ಪಿನ ಪ್ರತಿಯನ್ನು ಕೂಡಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸುವಂತೆ ಹೈಕೋರ್ಟ್‌ನ ರಿಜಿಸ್ಟ್ರಿಗೆ ನ್ಯಾಯಾಲಯ ಸೂಚಿಸಿದೆ.
ಸೆಪ್ಟಂಬರ್ 29, 2010ರ ಅಧಿಸೂಚನೆಯ ಮೂಲಕ ವಿವಾದಿತ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಹೊರಗಿಡಲು ಆದೇಶಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಯಿತು. ತರುವಾಯ, ಸರ್ಕಾರವು ಅಕ್ಟೋಬರ್ 19, 2010 ರ ಆದೇಶದ ಮೂಲಕ ಡಿನೋಟಿಫಿಕೇಶನ್ ನ್ನು ರದ್ದುಗೊಳಿಸಿತು.
ಸರ್ಕಾರಕ್ಕೆ ತಿಳಿದಿರುವ ಕಾರಣಗಳಿಗಾಗಿ ಈ ರದ್ದುಗೊಳಿಸುವ ಆದೇಶವನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗಿಲ್ಲ ಆದರೆ ಅಂತಹ ಕ್ರಮಗಳು ಕೆಲವು ಊಹಾಪೋಹಗಳಿಗೆ ವಿವಾದಕ್ಕೆ ಕಾರಣವಾಯಿತು. ಆದ್ದರಿಂದ, ಜಮೀನುಗಳ ಅಧಿಸೂಚನೆ ಮತ್ತು ಡಿನೋಟಿಫಿಕೇಶನ್ ಎರಡನ್ನೂ ಗೆಜೆಟ್‌ನಲ್ಲಿ ಪ್ರಕಟಿಸಲು ನ್ಯಾಯಾಲಯವು ಆದೇಶ ನೀಡಿದೆ.