ಬೆಂಗಳೂರು: ಆರು ವರ್ಷದ ಮೊಮ್ಮಗಳ ಮೇಲೆ ತಾತನೇ ಅತ್ಯಾಚಾರವೆಸಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಘಟನೆ ಬೆಳಕಿಗೆ ಬಂದ ನಂತರ ತನ್ನ ಪೋಷಕರು ಮತ್ತು ಸಹೋದರರು ಮನೆಯಿಂದ ಓಡಿಹೋಗಲು ಸಹಾಯ ಮಾಡಿದ್ದಕ್ಕಾಗಿ ಬಾಲಕಿಯ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪವೂ ಅವರ ಮೇಲಿದೆ. ಘಟನೆ ವೇಳೆ ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ದರು. ತಮಿಳುನಾಡು ಮೂಲದ ಈ ಕುಟುಂಬ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ನೆಲೆಸಿತ್ತು.
ಕೆಲಸದಿಂದ ಹಿಂದಿರುಗಿದ ನಂತರ, ಬಾಲಕಿಯ ತಾಯಿಗೆ ಅತ್ಯಾಚಾರದ ಬಗ್ಗೆ ತಿಳಿದು ಬಂದಿದೆ ಈ ವೇಳೆ ಆಕೆ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದರು. ಆದರೆ, ಆರೋಪಿಯು ಪೊಲೀಸರಿಗೆ ದೂರು ನೀಡದಿದ್ದರೆ ಸಂತ್ರಸ್ತೆಯ ಹೆಸರಿಗೆ ತನ್ನ ಆಸ್ತಿಯನ್ನು ನೋಂದಣಿ ಮಾಡುವುದಾಗಿ ಆಕೆಗೆ ಆಮೀಷ ಒಡ್ಡಲು ಯತ್ನಿಸಿದ್ದಾನೆ. ಆಕೆಗೆ ಚಿನ್ನಾಭರಣಗಳನ್ನೂ ನೀಡಿದ್ದಾನೆ.
ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಹುಡುಗಿಯ ತಂದೆ ಕೂಡ ಪೊಲೀಸರನ್ನು ಸಂಪರ್ಕಿಸದಂತೆ ತನ್ನ ಹೆಂಡತಿಗೆ ಸಲಹೆ ನೀಡಿದ್ದಾನೆ. ಮಹಿಳೆ ಇದಕ್ಕೆ ನಿರಾಕರಿಸಿದಾಗ, ಆಕೆಯ ಅತ್ತೆ ಮತ್ತು ಇತರ ಕುಟುಂಬ ಸದಸ್ಯರು ಘಟನೆಯನ್ನು ಮುಚ್ಚಿಡಲು ಅವಳನ್ನು ಒತ್ತಾಯಿಸಿದ್ದಾರೆ. ಕೊನೆಗೆ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ಬುಧವಾರ, ಮಹಿಳೆಯು ಹೇಗೋ ಕೆಲಸಕ್ಕೆ ಹೋಗುವ ನೆಪದಲ್ಲಿ ಮನೆಯಿಂದ ಹೊರಬಂದು ಅಕ್ಕಪಕ್ಕದವರ ಸಹಾಯ ಪಡೆದು ಚಿಕಿತ್ಸೆಗಾಗಿ ಅಪ್ರಾಪ್ತೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದು ಮೆಡಿಕೋ-ಲೀಗಲ್ ಪ್ರಕರಣವಾದ್ದರಿಂದ, ಪೊಲೀಸರಿಗೆ ತಿಳಿಸುವಂತೆ ಆಸ್ಪತ್ರೆಯವರು ಮಹಿಳೆಗೆ ಸೂಚಿಸಿದ್ದಾರೆ. ಬುಧವಾರ ರಾತ್ರಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾಳೆ. ಸಂತ್ರಸ್ತೆ ಸದ್ಯ ವಾಣಿವಿಲಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಳಿಮಾವು ಪೊಲೀಸರು ಆರೋಪಿ, ಆತನ ಪತ್ನಿ ಮತ್ತು ಇತರ ಇಬ್ಬರು ಪುತ್ರರ ಪತ್ತೆಗೆ ಮುಂದಾಗಿದ್ದು, ಪೋಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.