ಕಲಬುರಗಿ: ನಾಯಕತ್ವ ಬದಲಾವಣೆ ಅಥವಾ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ವೀರಶೈವ-ಲಿಂಗಾಯತ ಸಮುದಾಯದ ನಾಯಕರನ್ನು ಪರಿಗಣಿಸಬೇಕು ಎಂದು ಬಾಳೆಹೊನ್ನೂರು ರಂಭಾಪುರಿ ಮಠಾಧೀಶ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು ಶನಿವಾರ ಒತ್ತಾಯಿಸಿದ್ದಾರೆ.
ನಿನ್ನೆಯಷ್ಟೇ ಶ್ರೀಶೈಲ ಜಗದ್ಗುರು ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಅವರು ಇದೇ ಬೇಡಿಕೆಯನ್ನು ಮುಂದಿಟ್ಟದ್ದರು. ಇಂದು ಮತ್ತೊಮ್ಮೆ ಲಿಂಗಾಯತ ಶ್ರೀಗಳು ತಮ್ಮ ಸಮುದಾಯಕ್ಕೆ ಸಿಎಂ ಸ್ಥಾನ ನೀಡಬೇಕು ಎಂದು ಹೇಳಿದ್ದಾರೆ.
ಇಂದು ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಂಭಾಪುರಿ ಶ್ರೀ, ರಾಜ್ಯದಲ್ಲಿ ಕೆಲವರು ಮುಖ್ಯಮಂತ್ರಿ ಬದಲಾವಣೆ ಮಾಡಬೇಕು ಅಂತಾ ಹೇಳ್ತಿದ್ದಾರೆ. ಇನ್ನು ಕೆಲವರು ಮೂವರನ್ನು ಉಪಮುಖ್ಯಮಂತ್ರಿಗಳಾಗಿ ಮಾಡಿ ಅಂತಿದಾರೆ. ಎಲ್ಲಾ ಸಮುದಾಯ ಜನರ ಹಿತಾಸಕ್ತಿ ಕಾಪಾಡಿಕೊಂಡು ಹೋಗಬೇಕಾಗಿತ್ತು. ಆದರೆ, ಅವರವರಲ್ಲೆ ಕಿತ್ತಾಡಿಕೊಂಡು ಹೋಗ್ತಿರೋದು ನೋವುಂಟು ಮಾಡಿದೆ. ಆ ಪಕ್ಷದ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಅವರಿಗೆ ಬಿಟ್ಟಿದೆ. ಇದನ್ನ ನಿಯಂತ್ರಣ ಮಾಡಬೇಕಾದ್ರೆ ಕಾಂಗ್ರೆಸ್ ಹೈಕಮಾಂಡ್ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಒಂದು ವೇಳೆ ಸಿಎಂ ಬದಲಾವಣೆ ಮಾಡುವ ಪರಿಸ್ಥಿತಿ ಬಂದರೆ, ಲಿಂಗಾಯತ ನಾಯಕರನ್ನು ಪರಿಗಣಿಸಬೇಕು. ಚುನಾವಣೆಯಲ್ಲಿ ಪ್ರಬಲ ವೀರಶೈವ-ಲಿಂಗಾಯತ ಸಮುದಾಯವು ಕಾಂಗ್ರೆಸ್‌ಗೆ ಬೆಂಬಲ ನೀಡಿದೆ. ಕಾಂಗ್ರೆಸ್ ವೀರಶೈವ-ಲಿಂಗಾಯತ ಕೊಡುಗೆಯನ್ನು ನಿರ್ಲಕ್ಷ್ಯದಿಂದ ನೋಡಬಾರದು ಎಂದು ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮುಖ್ಯಮಂತ್ರಿ ಸ್ಥಾನ ಲಿಂಗಾಯಿತರಿಗೆ ಕೊಡೊದಕ್ಕೆ ಆಗದಿದ್ದರೆ ಉಪ ಮುಖ್ಯಮಂತ್ರಿ ಸ್ಥಾನಕ್ಕಾದ್ರು ಪರಿಗಣಿಸಬೇಕು ಎಂದು ರಂಭಾಪುರಿ ಶ್ರೀಗಳು ಆಗ್ರಹಿಸಿದ್ದಾರೆ.
ಧರ್ಮ ಪೀಠಗಳು ರಾಜಕೀಯಗಿ ಮಾತನಾಡುವುದು ಸರಿಯಲ್ಲ ಎಂದು ಒಪ್ಪಿಕೊಂಡ ಶ್ರೀಗಳು, ಆದರೆ ಅನಿವಾರ್ಯವಾಗಿ ಮಾತನಾಡುವ ಪರಿಸ್ಥಿತಿ ಬಂದಿರುವುದರಿಂದ ಧರ್ಮ ಪೀಠ ಮಾತಾಡಬೇಕಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಗಟ್ಟಿ ನಿಲುವು ತೆಗೆದುಕೊಂಡು ಪಕ್ಷದಲ್ಲಿ ಒಡಕು ಉಂಟು ಮಾಡುವ ಇಂತಹ ಬೆಳವಣಿಗೆಗಳಿಗೆ ಕಡಿವಾಣ ಹಾಕಬೇಕು ಎಂದರು.
ಗುರುವಾರ ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಅವರ ಸಮ್ಮುಖದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ, ಸಿದ್ದರಾಮಯ್ಯ ಅವರು ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂದು ಹೇಳಿದ್ದರು.
ವೀರಶೈವ-ಲಿಂಗಾಯತ, ಎಸ್‌ಸಿ/ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಂದ ಇನ್ನೂ ಮೂವರು ಉಪ ಮುಖ್ಯಮಂತ್ರಿಗಳನ್ನು ಹೊಂದಲು ಸಿದ್ದರಾಮಯ್ಯ ಸಂಪುಟದಲ್ಲಿ ಬೇಡಿಕೆ ಹೆಚ್ಚುತ್ತಿರುವ ಸಮಯದಲ್ಲಿ ಈ ಬೆಳವಣಿಗೆಯಾಗಿರುವುದು ಮಹತ್ವ ಪಡೆದುಕೊಂಡಿದೆ.