ವಿಧಾನಸೌಧ 
ರಾಜ್ಯ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ: ನಿಗಮ-ಮಂಡಳಿಗಳ ಹಣಕಾಸು ನಿರ್ವಹಣೆ ಮೇಲೆ ನಿಗಾವಹಿಸುವಂತೆ ಸುತ್ತೋಲೆ

ಚಾಲ್ತಿ ಖಾತೆ, ಉಳಿತಾಯ ಖಾತೆ, ನಿಶ್ಚಿತ ಠೇವಣಿ ಸೇರಿದಂತೆ ಎಲ್ಲ ಬ್ಯಾಂಕ್‌ ಖಾತೆಗಳ ಆರಂಭಿಕ ಮತ್ತು ಅಂತ್ಯದ ಶಿಲ್ಕಿನ ಕುರಿತು ಪ್ರತಿ ತಿಂಗಳು ಸಮಗ್ರ ಪರಿಶೀಲನೆ ನಡೆಸಬೇಕು. ನಿಶ್ಚಿತ ಠೇವಣಿಯ ಮೊತ್ತ, ಅವಧಿ ಪೂರ್ಣಗೊಳ್ಳುವುದು (ಮೆಚ್ಯುರಿಟಿ), ಬಡ್ಡಿ ಪಾವತಿ ಬಗ್ಗೆಯೂ ನಿಗಾ ಇರಿಸಬೇಕು.

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಗರಣ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದ್ದು, ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ ನಿಗಮಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಸರಿಯಾದ ರೀತಿಯಲ್ಲಿ ಹಣಕಾಸು ನಿರ್ವಹಿಸುವಂತೆ ಆದೇಶ ಹೊರಡಿಸಿದೆ.

ಸಾರ್ವಜನಿಕ ಉದ್ದಿಮೆಗಳು, ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ರಾಜ್ಯ ಸರ್ಕಾರದಿಂದ ಅನುದಾನ ಪಡೆಯುವ ಎಲ್ಲ ಸಂಸ್ಥೆಗಳು ಮತ್ತು ಅರೆ ಸ್ವಾಯತ್ತ ಸಂಸ್ಥೆಗಳ ಹಣಕಾಸಿನ ವಹಿವಾಟಿನ ಮೇಲೆ ಬಹುಹಂತದ ನಿಗಾ ಇರಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಸುತ್ತೋಲೆ ಹೊರಡಿಸಿದ್ದಾರೆ.

ಚಾಲ್ತಿ ಖಾತೆ, ಉಳಿತಾಯ ಖಾತೆ, ನಿಶ್ಚಿತ ಠೇವಣಿ ಸೇರಿದಂತೆ ಎಲ್ಲ ಬ್ಯಾಂಕ್‌ ಖಾತೆಗಳ ಆರಂಭಿಕ ಮತ್ತು ಅಂತ್ಯದ ಶಿಲ್ಕಿನ ಕುರಿತು ಪ್ರತಿ ತಿಂಗಳು ಸಮಗ್ರ ಪರಿಶೀಲನೆ ನಡೆಸಬೇಕು. ನಿಶ್ಚಿತ ಠೇವಣಿಯ ಮೊತ್ತ, ಅವಧಿ ಪೂರ್ಣಗೊಳ್ಳುವುದು (ಮೆಚ್ಯುರಿಟಿ), ಬಡ್ಡಿ ಪಾವತಿ ಬಗ್ಗೆಯೂ ನಿಗಾ ಇರಿಸಬೇಕು. ಈ ಎಲ್ಲ ಸಂಸ್ಥೆಗಳ ಹಣಕಾಸಿನ ವಹಿವಾಟಿನ ಕುರಿತು ಮೂರನೇ ವ್ಯಕ್ತಿಗಳಿಂದ ತಪಾಸಣೆ ಮಾಡಿಸಬೇಕು. ಆಂತರಿಕ ಲೆಕ್ಕಪರಿಶೋಧಕರಿಂದ ಈ ಬಗ್ಗೆ ವರದಿ ಪಡೆದು ಸಂಸ್ಥೆಗಳ ಆಡಳಿತ ಮಂಡಳಿ ಸಭೆಯಲ್ಲಿ ಮಂಡಿಸಬೇಕು. ಆಯಾ ಸಂಸ್ಥೆಗಳ ಹಣಕಾಸು ವ್ಯವಹಾರಗಳ ಕುರಿತು ಬ್ಯಾಂಕ್‌ಗಳಿಂದ ದಾಖಲೆಗಳನ್ನು ಪಡೆದು, ಪ್ರತ್ಯೇಕವಾಗಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದ್ದಾರೆ.

ಹೊರ ಊರುಗಳಲ್ಲಿ ಹೂಡಿಕೆ ನಿರ್ಬಂಧ: ಯಾವುದೇ ಸಂಸ್ಥೆಗಳು ತಮ್ಮ ಕೇಂದ್ರ ಸ್ಥಾನದ ನಗರದಿಂದ ಹೊರಗಿರುವ ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡುವಂತಿಲ್ಲ. ಹೂಡಿಕೆಯ ಮೊತ್ತವನ್ನು ಆಯಾ ಸಂಸ್ಥೆಗಳ ಹೆಸರಿನಲ್ಲೇ ತೆರೆದ ಖಾತೆಗಳಿಗೆ ಇಂಟರ್‌ನೆಟ್‌ ಬ್ಯಾಂಕಿಂಗ್‌ ಅಥವಾ ಆರ್‌ಟಿಜಿಎಸ್‌ ಮೂಲಕ ಮಾತ್ರ ವರ್ಗಾಯಿಸಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ.

ನಿಶ್ಚಿತ ಠೇವಣಿಗಳನ್ನು ಒಂದೇ ಖಾತೆಯಲ್ಲಿ ನಿರ್ವಹಿಸಬೇಕು. ಮೊತ್ತವನ್ನು ಒಂದಕ್ಕಿಂತ ಹೆಚ್ಚು ಭಾಗಗಳಾಗಿ ವಿಂಗಡಿಸಿ ಹೂಡಿಕೆ ಮಾಡುವಂತಿಲ್ಲ. ಹೂಡಿಕೆ ಪತ್ರಗಳನ್ನು ಆಯಾ ಬ್ಯಾಂಕ್‌ಗಳ ವ್ಯವಸ್ಥಾಪಕ ನಿರ್ದೇಶಕರು ಅಥವಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೃಢೀಕರಿಸುವುದು ಕಡ್ಡಾಯ ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಆಯಾ ಸಂಸ್ಥೆಗಳು ಹೂಡಿಕೆಗೆ ಸಂಬಂಧಿಸಿದ ಮಾಹಿತಿಗಳನ್ನು ಒಂದು ಪ್ರತ್ಯೇಕ ಕಡತದಲ್ಲಿ ನಮೂದಿಸಬೇಕು. ಪ್ರತಿ ತಿಂಗಳು ಆಂತರಿಕ ಲೆಕ್ಕಪರಿಶೋಧಕರ ಮುಂದೆ ಆ ಕಡವನ್ನು ಹಾಜರುಪಡಿಸಬೇಕು. ಅಕ್ರಮ ತಡೆಗೆ ಜಂಟಿ ಖಾತೆಗಳಲ್ಲಿ ವಹಿವಾಟು ನಡೆಸಬೇಕು. ಈ ವಹಿವಾಟುಗಳ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಬೇಕು ಎಂದು ಸೂಚಿಸಿದ್ದಾರೆ.

ನಿಗಮ ಮಂಡಳಿ ಸ್ವಾಯತ್ತ ಸಂಸ್ಥೆಗಳ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಆಯಾ ಇಲಾಖೆಗಳ ಕಾರ್ಯದರ್ಶಿಗಳು ಈ ಎಲ್ಲ ಸಂಸ್ಥೆಗಳ ಹಣಕಾಸು ವಹಿವಾಟಿನ ಮೇಲೆ ನಿಗಾ ಇರಿಸಬೇಕು. ತಮ್ಮ ಇಲಾಖೆಗಳ ವ್ಯಾಪ್ತಿಯ ಸಂಸ್ಥೆಗಳ ಬ್ಯಾಂಕ್‌ ಖಾತೆಗಳ ವಿವರ ಸಂಗ್ರಹಿಸುವುದರ ಜತೆಗೆ ಅವುಗಳನ್ನು ಖಜಾನೆ ಜತೆ ಜೋಡಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಸುತ್ತೋಲೆಯಲ್ಲಿ ನಿರ್ದೇಶನ ನೀಡಿದ್ದಾರೆ.

ಕಾರ್ಯದರ್ಶಿಗಳು ನಿಯಮಿತವಾಗಿ ಆಯಾ ಸಂಸ್ಥೆಗಳ ಹಣಕಾಸು ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಬೇಕು. ಸರ್ಕಾರದಿಂದ ನಾಮನಿರ್ದೇಶನ ಹೊಂದಿದ ನಿರ್ದೇಶಕರು ಕೂಡ ಆಂತರಿಕ ಲೆಕ್ಕ ಪರಿಶೋಧನಾ ವರದಿಗಳು ಸೇರಿದಂತೆ ಎಲ್ಲ ವಿವರಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT