ಬಿಜೆಪಿ ಮಾಡಿರುವ ಟ್ವೀಟ್
ಬಿಜೆಪಿ ಮಾಡಿರುವ ಟ್ವೀಟ್  
ರಾಜ್ಯ

ವಿಧಾನಸೌಧ ಆವರಣದಲ್ಲಿ ಪಾಕ್​ ಪರ ​ಘೋಷಣೆ ಕೂಗಿರುವುದು ದೃಢ: ಬಿಜೆಪಿ ಟ್ವೀಟ್

Sumana Upadhyaya

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ನ ಡಾ ನಾಸಿರು ಹುಸೇನ್ ಪರ ಬೆಂಬಲಿಗರು ವಿಧಾನಸೌಧ ಆವರಣದಲ್ಲಿ ಸಂಭ್ರಮಾಚರಣೆ ಮಾಡುವ ವೇಳೆ 'ಪಾಕಿಸ್ತಾನ​ ಜಿಂದಾಬಾದ್​​ ಘೋಷಣೆ' ಕೂಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯ (FSL)​ ಪರೀಕ್ಷೆಯಲ್ಲಿ ದೃಢವಾಗಿದೆ ಎಂದು ಬಿಜೆಪಿ ಹೇಳುತ್ತಿದೆ.

ಈ ಕುರಿತು ಟ್ವೀಟ್​ ಮಾಡಿರುವ ಬಿಜೆಪಿ “ವಿಧಾನಸೌಧದ ಒಳಗೆ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಎಫ್​ಎಸ್​ಎಲ್​ ವರದಿಯಲ್ಲಿ ಬಹಿರಂಗವಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ” ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದೆ.

“ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ರಾಷ್ಟ್ರ ವಿರೋಧಿ ಧೋರಣೆಯ ಕಾಂಗ್ರೆಸ್​ ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು” ಎಂದು ಹೇಳಿದೆ.

ಆದರೆ ಈ ವರದಿಯನ್ನು ಸಂವಾದ ಫೌಂಡೇಶನ್ ಎಂಬ ಖಾಸಗಿ ಸಂಸ್ಥೆ ತಯಾರಿಸಿದೆ ಎಂದು ಹೇಳಲಾಗುತ್ತಿದ್ದು ಇದರ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಬೇಕಿದೆ.

ಗೃಹ ಸಚಿವರು ಹೇಳುವುದೇನು?: ಎಫ್‌ಎಸ್‌ಎಲ್‌ ವರದಿ ಇನ್ನಷ್ಟೇ ಬರಬೇಕಿದೆ. ಆದಷ್ಟು ಬೇಗ ವರದಿ ಕೇಳಿದ್ದೇವೆ. ಇದರಲ್ಲಿ ಮುಚ್ಚಿಡುವಂಥದ್ದೇನಿಲ್ಲ, FSL ಗೆ ನೀಡಲಾದ ವೀಡಿಯೊಗಳು ಒಂದು ಚಾನಲ್ ಅಥವಾ ಒಂದು ಕ್ಲಿಪ್‌ನಿಂದ ಅಲ್ಲ. ಹಲವಾರು ಕ್ಲಿಪ್ಪಿಂಗ್‌ಗಳನ್ನು ಭದ್ರಪಡಿಸಿ ಎಫ್‌ಎಸ್‌ಎಲ್‌ಗೆ ನೀಡಲಾಗಿದೆ. ವರದಿ ಬರಬೇಕಿದ್ದು, ವರದಿ ಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.

ಈವರೆಗೆ ಏಳು ಮಂದಿಯನ್ನು ಕರೆಸಿ ಹೇಳಿಕೆ ಪಡೆಯಲಾಗಿದೆ. ಜೊತೆಗೆ ಅವರ ಧ್ವನಿ ಮಾದರಿಗಳನ್ನು ಕ್ಲಿಪ್‌ನಲ್ಲಿ ಹೋಲಿಸಲು ದಾಖಲು ಮಾಡಿಕೊಳ್ಳಲಾಗಿದೆ. 'ಶಂಕಿತನೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ಆತನ ಧ್ವನಿ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ವರದಿ ಬಂದ ನಂತರ ನಾವು ಮುಂದಿನ ತನಿಖೆಯ ಬಗ್ಗೆ ತಿಳಿಸುತ್ತೇವೆ ಎಂದಿದ್ದಾರೆ.

SCROLL FOR NEXT