ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ರಾಜ್ಯ

ವಾರ್ಷಿಕ ಲೆಕ್ಕಪರಿಶೋಧನಾ ವರದಿ ಸಲ್ಲಿಸದ ಬಿಲ್ಡರ್‌ಗಳಿಗೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ನೋಟಿಸ್

Ramyashree GN

ಬೆಂಗಳೂರು: ಬಿಲ್ಡರ್‌ಗಳು ತಮ್ಮ ವಾರ್ಷಿಕ ಲೆಕ್ಕಪರಿಶೋಧನಾ ವರದಿಗಳನ್ನು ಕಡ್ಡಾಯವಾಗಿ ಪ್ರಾಧಿಕಾರಕ್ಕೆ ಸಲ್ಲಿಸದ ಹಿನ್ನೆಲೆಯಲ್ಲಿ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು (ಕೆ-ರೇರಾ) ರಾಜ್ಯದಲ್ಲಿ 1,000ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಯೋಜನೆಗಳ ಜವಾಬ್ದಾರಿ ಹೊಂದಿರುವ ಬಿಲ್ಡರ್‌ಗಳಿಗೆ ಶೋಕಾಸ್ ನೋಟಿಸ್ ಕಳುಹಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಯೋಜನೆಗಳಲ್ಲಿ ಹೆಚ್ಚಿನವು ಬೆಂಗಳೂರಿನಲ್ಲಿ ನೆಲೆಗೊಂಡಿವೆ.

ಕೆ-ರೇರಾದ ಉನ್ನತ ಮೂಲಗಳು ಟಿಎನ್ಐಇಗೆ ಮಾಹಿತಿ ನೀಡಿದ್ದು, 'ನಾವು ಫೆಬ್ರುವರಿಯಲ್ಲಿ ನೋಟಿಸ್‌ಗಳನ್ನು ನೀಡಲು ಪ್ರಾರಂಭಿಸಿದ್ದೇವೆ. 500 ಕ್ಕೂ ಹೆಚ್ಚು ನೋಟಿಸ್‌ಗಳನ್ನು ಈಗಾಗಲೇ ರವಾನಿಸಲಾಗಿದೆ. ಉಳಿದವು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ವರ್ಷ ಕಳೆದರೂ 2022-2023ರ ಆಡಿಟ್ ವರದಿಗಳನ್ನು ಒದಗಿಸಲು ಡೆವಲಪರ್‌ಗಳು ವಿಫಲರಾಗಿದ್ದಾರೆ. ಬಿಲ್ಡರ್‌ಗಳ ಈ ಲೋಪಕ್ಕೆ ಏಕೆ ದಂಡ ವಿಧಿಸಬಾರದು ಎಂಬುದಕ್ಕೆ ಪ್ರತಿಕ್ರಿಯಿಸಲು ಒಂದು ತಿಂಗಳ ಸಮಯವನ್ನು ಸಹ ನೀಡಲಾಗಿದೆ' ಎಂದಿದ್ದಾರೆ.

ಸದ್ಯ ನೀಡಿರುವ ನೋಟಿಸ್‌ಗೆ ದಂಡದ ಮೊತ್ತ ಇನ್ನೂ ಅಂತಿಮಗೊಂಡಿಲ್ಲ. 'ನಾವು ಡೆವಲಪರ್‌ಗಳಿಂದ ವಿವರಣೆಗಾಗಿ ಕಾಯುತ್ತಿದ್ದೇವೆ. ಈ ಆಡಿಟ್ ವರದಿಗಳನ್ನು ಸಲ್ಲಿಸುವುದರಿಂದ ಯೋಜನೆಗಳನ್ನು ಮುಚ್ಚಿರುವ ಅಥವಾ ಆಕ್ಯುಪೆನ್ಸಿ ಪ್ರಮಾಣಪತ್ರಗಳನ್ನು ಪಡೆದಿರುವ ಅಥವಾ ವ್ಯಾಜ್ಯದಿಂದಾಗಿ ಯೋಜನೆ ಸ್ಥಗಿತಗೊಂಡಿರುವ ಕೆಲವು ವರ್ಗಗಳಿಗೆ ವಿನಾಯಿತಿ ನೀಡಲಾಗಿದೆ' ಎಂದು ಮೂಲವೊಂದು ತಿಳಿಸಿದೆ.

2021-2022ರ ಹಣಕಾಸು ವರ್ಷದಲ್ಲಿ ಇದೇ ರೀತಿಯ ಲೋಪಕ್ಕಾಗಿ, 440 ಯೋಜನೆಗಳಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಲಾಯಿತು ಮತ್ತು ಒಟ್ಟು ಯೋಜನಾ ವೆಚ್ಚದ ಶೇ 0.5 ರಷ್ಟು ದಂಡ ವಿಧಿಸಲಾಗಿದೆ. 'ದಂಡವನ್ನು ಪಾವತಿಸಲು ಆದೇಶಿಸಿ 2024 ರ ಜನವರಿಯಲ್ಲಿ ನೋಟಿಸ್‌ಗಳನ್ನು ನೀಡಲಾಗಿದೆ' ಎಂದು ಅವರು ಹೇಳಿದರು.

ಬಾಕಿ ಉಳಿದಿರುವ ದಂಡ 486 ಕೋಟಿ ರೂ.

ರೇರಾದ ದತ್ತಾಂಶದ ಪ್ರಕಾರ, 2018 ರಿಂದ 1,110 ಪ್ರಕರಣಗಳಲ್ಲಿ (ಒಂದೇ ಯೋಜನೆಯು ಬಹು ಪ್ರಕರಣಗಳಲ್ಲಿ ಭಾಗಿಯಾಗಿರಬಹುದು) ದಂಡವಾಗಿ ವಿಧಿಸಲಾದ ಒಟ್ಟು 486.66 ಕೋಟಿ ರೂ.ಗಳನ್ನು 140 ಬಿಲ್ಡರ್‌ಗಳಿಂದ ವಸೂಲಿ ಮಾಡಬೇಕಾಗಿದೆ. 'ಕೆಲವು ಪ್ರಕರಣಗಳಲ್ಲಿ ಬಿಲ್ಡರ್‌ಗಳು ಈಗಾಗಲೇ ದಂಡ ಪಾವತಿಸಿದ್ದಾರೆ. ಬೆಂಗಳೂರು ನಗರದಲ್ಲಿಯೇ 100 ಕ್ಕೂ ಹೆಚ್ಚು ದಂಡ ಪಾವತಿಸದ ಡೆವಲಪರ್‌ಗಳಿದ್ದಾರೆ' ಎಂದು ಮತ್ತೋರ್ವ ಅಧಿಕಾರಿ ಹೇಳಿದರು.

ಬಾಕಿ ವಸೂಲಿ ಮಾಡುವ ಜವಾಬ್ದಾರಿಯು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳ ಮೇಲಿದೆ ಮತ್ತು ಇದನ್ನು ರೇರಾ ಕಾಯ್ದೆಯ ಸೆಕ್ಷನ್ 25 ಮತ್ತು 40 (ಎ) ಅಡಿಯಲ್ಲಿ ಸ್ಪಷ್ಟವಾಗಿ ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಇಲ್ಲಿಯವರೆಗೆ ಮಾಡಿದ ಶೇಕಡಾವಾರು ವಸೂಲಾತಿಗಳ ಬಗ್ಗೆ ಕೇಳಿದಾಗ, 'ನಾವು ಆದಾಯ ತೆರಿಗೆ, ಬಿಬಿಎಂಪಿ ಮತ್ತು ಇತರ ಆಡಳಿತಾತ್ಮಕ ಸಂಸ್ಥೆಗಳೊಂದಿಗೆ ಅನೇಕ ಸುತ್ತಿನ ಚರ್ಚೆಗಳನ್ನು ನಡೆಸಿದ್ದೇವೆ. ಅಂತಹ ಬಿಲ್ಡರ್‌ಗಳ ಆಸ್ತಿಯನ್ನು ಗುರುತಿಸಲು ಅವರು ನಮ್ಮನ್ನು ಕೇಳಿದರು ಮತ್ತು ನಾವು ಅದನ್ನು ನಿಯಮಿತವಾಗಿ ನವೀಕರಿಸುತ್ತಿದ್ದೇವೆ. ಬಿಲ್ಡರ್‌ಗಳಿಗೆ ವಿಧಿಸಿರುವ ದಂಡವನ್ನು ವಸೂಲಿ ಮಾಡುವಲ್ಲಿ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್‌ಗಳು ಸಕ್ರಿಯ ಪಾತ್ರ ವಹಿಸಬೇಕು' ಎಂದು ಇನ್ನೊಬ್ಬ ಹಿರಿಯ ಅಧಿಕಾರಿಯೊಬ್ಬರು ಒತ್ತಾಯಿಸಿದರು.

SCROLL FOR NEXT