ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ರಾಜ್ಯ

ಪೀಣ್ಯ ಪೇಪರ್ ಗೋಡೌನ್‌ನಲ್ಲಿ ಬೆಂಕಿ ಅವಘಡ; ಬೆಂಗಳೂರು ನಗರದ ಕೆಲವೆಡೆ ವಿದ್ಯುತ್ ಕಡಿತ

Ramyashree GN

ಬೆಂಗಳೂರು: ಪೇಪರ್ ರೋಲ್ ಸ್ಟೋರ್‌ಹೌಸ್ ಮತ್ತು ಗೋಡೌನ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಪ್ರಸರಣ ಮಾರ್ಗವನ್ನು ಸ್ಥಗಿತಗೊಳಿಸಲಾಗಿದ್ದು, ನೈಋತ್ಯ ಮತ್ತು ಪಶ್ಚಿಮ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಬುಧವಾರ ಸಂಜೆ 5 ರಿಂದ ತಡರಾತ್ರಿಯವರೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

220 ಕೆವಿ ಎಸ್‌ಆರ್‌ಎಸ್ ಸಬ್‌ಸ್ಟೇಷನ್ ಹಿಂಭಾಗದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ, ಲೈನ್ ಅನ್ನು ಸ್ವಿಚ್ ಆಫ್ ಮಾಡಲಾಗಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

'ಬೆಂಕಿಯ ಕಿಡಿ ತಂತಿಯನ್ನು ಸ್ಪರ್ಶಿಸಿದರೆ, ಹಾನಿ ಉಂಟಾಗುತ್ತಿತ್ತು ಮತ್ತು ಹಾನಿ ತೀವ್ರವಾಗಿರುತ್ತಿತ್ತು. ಬೆಂಕಿ ತಗುಲಿದ ಗೋಡೌನ್ ಮೇಲೆಯೇ ವಿದ್ಯುತ್ ತಂತಿ ಹಾದು ಹೋಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಅಗ್ನಿಶಾಮಕ ದಳ ಮತ್ತು ತುರ್ತು ವಿಭಾಗವು ಸುರಕ್ಷಿತವಾಗಿದೆ ಎಂದು ಹೇಳಿದ ನಂತರವಷ್ಟೇ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ' ಎಂದು ಅಧಿಕಾರಿ ಹೇಳಿದರು.

ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ

ಬುಧವಾರ ಮಧ್ಯಾಹ್ನ ಯಶವಂತಪುರ ಉಪನಗರದ ಪೀಣ್ಯದ ಅಕ್ಷಯನಗರದಲ್ಲಿರುವ ಪೇಪರ್ ರೋಲ್ ಸ್ಟೋರ್‌ಹೌಸ್ ಮತ್ತು ಗೋದಾಮಿನಲ್ಲಿ ಸಂಭವಿಸಿದ ಬೆಂಕಿಯನ್ನು ನಂದಿಸಲು ನಾಲ್ಕು ಅಗ್ನಿಶಾಮಕ ವಾಹನಗಳು ಕಾರ್ಯನಿರ್ವಹಿಸುತ್ತಿವೆ.

ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ ಮಧ್ಯಾಹ್ನ 1.58ಕ್ಕೆ ಕರೆ ಬಂದಿದೆ. ಯಶವಂತಪುರ, ರಾಜಾಜಿನಗರ, ಹೈಗ್ರೌಂಡ್ಸ್ ಮತ್ತು ಪೀಣ್ಯ ಅಗ್ನಿಶಾಮಕ ಠಾಣೆಗಳಿಂದ ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದವು.

ಮಾರ್ಗಗಳು ಕಿರಿದಾಗಿದ್ದರಿಂದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರಲು ಕಷ್ಟವಾಯಿತು. ಬೆಂಕಿ ನಂದಿಸಲು ಗೋಡೌನ್‌ನ ಗೋಡೆಗಳನ್ನು ಒಡೆದು ಹಾಕಲು ಜೆಸಿಬಿಗಳನ್ನು ಬಳಸಬೇಕಾಗಿತ್ತು. ರಾತ್ರಿ 10 ಗಂಟೆ ಸುಮಾರಿಗೆ ಬೆಂಕಿಯನ್ನು ಹತೋಟಿಗೆ ತರಲಾಯಿತು. ಗೋಡೌನ್‌ನಲ್ಲಿ ಪೇಪರ್ ರೋಲ್‌ಗಳಿಂದಾಗಿ ಬೆಂಕಿ ಹೆಚ್ಚುತ್ತಲೇ ಇತ್ತು. ಬೆಂಕಿ ಅಕ್ಕಪಕ್ಕದ ಕಟ್ಟಡಗಳಿಗೆ ಹರಡದಂತೆ ಸಿಬ್ಬಂದಿ ನೋಡಿಕೊಂಡರು. ಯಾವುದೇ ಗಾಯಗಳು ಅಥವಾ ಸಾವು ನೋವುಗಳು ವರದಿಯಾಗಿಲ್ಲ.

ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಎಫ್‌ಎಸ್‌ಎಲ್‌ನ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರೇಟ್‌ನ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಕಾರಣವನ್ನು ಪರಿಶೀಲಿಸಲಿದೆ. ನಗರದ ಉತ್ತರ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT