ಸಂಸದೆ ಸುಮಲತಾ ಅಂಬರೀಶ್
ಸಂಸದೆ ಸುಮಲತಾ ಅಂಬರೀಶ್ 
ರಾಜ್ಯ

ಟ್ರಯಲ್ ಬ್ಲಾಸ್ಟ್‌ ಹಿಂದೆ ಅಕ್ರಮ ಗಣಿಗಾರಿಕೆ ಲಾಬಿ: ಸಂಸದೆ ಸುಮಲತಾ ಅಂಬರೀಶ್ ಆರೋಪ

Manjula VN

ಮೈಸೂರು: ಕೆಆರ್‌ಎಸ್‌ ಜಲಾಶಯದ ಬಳಿ ಟ್ರಯಲ್ ಬ್ಲಾಸ್ಟ್ ನಡೆಸುವುದರ ಹಿಂದೆ ಅಕ್ರಮ ಗಣಿ ಲಾಬಿ ಇದೆ ಎಂದು ಸಂಸದೆ ಸುಮಲತಾ ಅಂಬರೀಷ್ ಅವರು ಬುಧವಾರ ಆರೋಪಿಸಿದರು.

ಸುದ್ದಿಗಾರರರೊಂದಿಗೆ ಮಾತಾಡಿದ ಅವರು, ಟ್ರಯಲ್ ಬ್ಲಾಸ್ಟ್ ಗೆ ಮೊದಲಿನಿಂದಲೂ ನನ್ನ ವಿರೋಧವಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದಾಗ ತಜ್ಞರು ಕೇವಲ ಸರ್ವೇಗಷ್ಟೇ ಬಂದಿದ್ದಾರೆಂದು ಹೇಳಿದ್ದರು. ಈಗ ನೋಡಿದರೆ ಯಾವ ಬ್ಲಾಸ್ಟ್ ಕೂಡ ನಡೆಯೋಲ್ಲ ಎಂದು ಹೇಳುತ್ತಿದ್ದಾರೆ. ನಮ್ಮನ್ನು ದಿಕ್ಕು ತಪ್ಪಿಸುವ ಕೆಲಸ ಜಿಲ್ಲಾಡಳಿತ ಮಂಡಳಿಯಿಂದ ನಡೆದಿದೆ ಎಂದು ಹೇಳಿದರು.

ಪರೀಕ್ಷಾರ್ಥ ಸ್ಫೋಟಕ್ಕೆ ಹೈಕೋರ್ಟ್ ಆದೇಶವೇ ಇಲ್ಲದಿದ್ದ ಮೇಲೆ ತಜ್ಞರನ್ನು ಕರೆಸುವ ಅಗತ್ಯವೇನಿತ್ತು. ತರಾತುರಿಯಲ್ಲಿ ಟ್ರಯಲ್ ಬ್ಲಾಸ್ಟ್'ಗೆ ಜಿಲ್ಲಾಡಳಿತ ಮುಂದಾಗಿದ್ದರ ಹಿಂದೆ ಅಕ್ರಮ ಗಣಿಗಾರಿಕೆ ಒತ್ತಡವಿದ್ದರೂ ಇರುತ್ತದೆ ಎಂದು ತಿಳಿಸಿದರು.

ಅಧಿಕಾರಿಗಳು ಒಂದೊಂದು ಬಾರಿ ಅಸಹಾಯಕರಾಗುತ್ತಾರೆ. ಅಧಿಕಾರಿಗಳ ಮೇಲೆ ಯಾರ ಒತ್ತಡ ಇದೆ ಎಂಬುದನ್ನು ಮೊದಲು ತಿಳಿಯಬೇಕು. ಕೆಆರ್ ಎಸ್ ಅಣೆಕಟ್ಟೆಯ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ. ಎಲ್ಲರೂ ಅದನ್ನು ಪಾಲಿಸಬೇಕೆಂದು ಹೇಳಿದರು.

ಏತನ್ಮಧ್ಯೆ, ಲೋಕಸಭಾ ಸದಸ್ಯೆಯಾಗಿ ಅಧಿಕಾರಾವಧಿ ಪೂರ್ಣಗೊಂಡ ನಂತರ ಅಧಿಕೃತವಾಗಿ ಬಿಜೆಪಿ ಸೇರುವುದಾಗಿ ಸುಮಲತಾ ಹೇಳಿದರು.

ಕೆಲವು ತಾಂತ್ರಿಕ ಸಮಸ್ಯೆಗಳಿಂದ ಬಿಜೆಪಿ ಪಕ್ಷಕ್ಕೆ ಸೇರಲು ಸಾಧ್ಯವಾಗಲಿಲ್ಲ. ಪಕ್ಷದ ಸಿದ್ಧಾಂತ ಮತ್ತು ಕಾರ್ಯಕ್ಷಮತೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಪ್ರಧಾನಿ ಮೋದಿಯವರ ನಂಬಿಕೆಗಾಗಿ ನಾನು ಪಕ್ಷಕ್ಕೆ ಸೇರುತ್ತೇನೆ. ಮೋದಿ ನನ್ನ ಸ್ಫೂರ್ತಿ. ಅವರ ಕೈಗಳನ್ನು ಮತ್ತಷ್ಟು ಬಲಪಡಿಸುತ್ತೇನೆ ಎಂದು ತಿಳಿಸಿದರು.

ಇದೇ ವೇಳೆ ಸಂಸದೆಯಾಗಿ ನನ್ನ ಸಾಧನೆಯ ಆಧಾರದ ಮೇಲೆ ಬಿಜೆಪಿ ಟಿಕೆಟ್ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ದುಡ್ಡು ಪಡೆಯುವ ಸಂಸ್ಕೃತಿ ಇದೆ. ಪಕ್ಷದೊಂದಿಗೆ ಸಂಪರ್ಕವೇ ಇಲ್ಲದವರನ್ನು ಕರೆತಂದು ಅಭ್ಯರ್ಥಿ ಮಾಡಿದ್ದಾರೆ. ಬೂದನೂರು ಉತ್ಸವ ಸರ್ಕಾರಿ ಹಣದಲ್ಲಿ ನಡೆದಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಮಂಡ್ಯ ಲೋಕಸಭಾ ಅಭ್ಯರ್ಥಿ ಎಂದು ಪರಿಚಯ ಮಾಡುತ್ತಾರೆ. ಸರ್ಕಾರಿ ಹಣ ಬಳಸಿ ನಿಮ್ಮ ಅಭ್ಯರ್ಥಿಯನ್ನು ಪರಿಚಯಿಸುತ್ತೀರಾ? ಹಾಗಾದರೆ ನೀವು ಹೇಗೆ ಚುನಾವಣೆ ಮಾಡುತ್ತೀರಾ? ಕಾಂಗ್ರೆಸ್ ಪಕ್ಷದಲ್ಲಿ ದುಡ್ಡಿರವವರಿಗೆ ಮಣೆ ಹಾಕುತ್ತಾರೆ. ಮಂಡ್ಯ ಜನ ದಡ್ಡರೇನಲ್ಲ. ಅವರನ್ನು ಯಾವ ಕಾರಣಕ್ಕೆ ಅಭ್ಯರ್ಥಿ ಮಾಡಿದ್ದಾರೆಂಬ ವಿಚಾರ ಗೊತ್ತಿದೆ. ದುಡ್ಡಿನಿಂದ ಮಡ್ಯ ಜನರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದರು.

SCROLL FOR NEXT