ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ರಾಜ್ಯ

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಮಳೆಗಾಲದವರೆಗೆ ವರ್ಕ್ ಫ್ರಂ ಹೋಂ, ಆನ್‌ಲೈನ್ ತರಗತಿಗೆ ನಿವಾಸಿಗಳ ಒತ್ತಾಯ

Ramyashree GN

ಬೆಂಗಳೂರು: ನಗರದಲ್ಲಿನ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮಳೆಗಾಲ ಬರುವವರೆಗೆ ನೀರನ್ನು ಉಳಿಸಲು ವರ್ಕ್ ಫ್ರಂ ಹೋಂ (ಡಬ್ಲ್ಯುಎಫ್‌ಹೆಚ್) ಮತ್ತು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಅವಕಾಶ ನೀಡುವಂತೆ ಬೆಂಗಳೂರು ನಿವಾಸಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಎರಡು ವಾರಗಳಿಗೂ ಹೆಚ್ಚು ಕಾಲ ತೀವ್ರ ನೀರಿನ ಸಮಸ್ಯೆಯಿಂದಾಗಿ ಬೆಂಗಳೂರಿನ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಈ ಸಂಕಷ್ಟದ ಪರಿಸ್ಥಿತಿಯ ನಡುವೆ ತಾಪಮಾನ ಏರಿಕೆಯಾಗುತ್ತಿರುವುದು ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ನೀರನ್ನು ಉಳಿಸಲು ಮತ್ತು ನೌಕರರು ಮತ್ತು ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಆನ್‌ಲೈನ್ ತರಗತಿಗಳನ್ನು ಮುಂದುವರಿಸಲು ಶಿಕ್ಷಣ ಸಂಸ್ಥೆಗಳಿಗೆ ಮತ್ತು ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂಗೆ ಅವಕಾಶ ನೀಡಬೇಕು ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಮುಖ್ಯಮಂತ್ರಿಗೆ ಮನವಿ

ಈಮಧ್ಯೆ, ಐಟಿ ಕಂಪನಿಗಳಿಗೆ ಮನೆಯಿಂದ ಕೆಲಸವನ್ನು ಕಡ್ಡಾಯಗೊಳಿಸುವಂತೆ ಮತ್ತು ಶಾಲೆಗಳು ಆನ್‌ಲೈನ್‌ ತರಗತಿಗಳನ್ನು ನಡೆಸಲು ಅವಕಾಶ ಮಾಡಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಲವು ಮನವಿ ಮಾಡಲಾಗಿದೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ವರ್ಕ್ ಫ್ರಂ ಹೋಂಗೆ ಅವಕಾಶ ನೀಡಲಾಗಿತ್ತು ಎಂದರೆ ಇದೀಗ ನೀರಿನ ಬಿಕ್ಕಟ್ಟು ಉಂಟಾಗಿರುವ ಸಮಯದಲ್ಲಿಯೂ ಇದಕ್ಕೆ ಅವಕಾಶ ನೀಡಬಹುದು ಎಂದು ಬೆಂಗಳೂರಿನ ನಿವಾಸಿಗಳು ಹೇಳಿದ್ದಾರೆ.

ಎಲ್‌ನಿನೋ ಪರಿಣಾಮದಿಂದ ತಾಪಮಾನ ಏರಿಕೆ

2023ರಲ್ಲಿ ಮಳೆಯಾಗಿಲ್ಲದ ಕಾರಣ ಕರ್ನಾಟಕ, ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕೆಟ್ಟ ನೀರಿನ ಬಿಕ್ಕಟ್ಟು ಉಂಟಾಗಿದೆ. ಮಳೆ ಕೊರತೆಗೆ ಎಲ್‌ನಿನೋ ಪರಿಣಾಮ ಕಾರಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಐಎಂಡಿ ವಿಜ್ಞಾನಿ ಎ ಪ್ರಸಾದ್ ಅವರ ಪ್ರಕಾರ, ಕಳೆದ ವರ್ಷ ಎಲ್‌ನಿನೋ ಪರಿಣಾಮವಿತ್ತು. ಈ ವರ್ಷವೂ ಎಲ್‌ನಿನೋ ಪರಿಣಾಮ ಸಾಧಾರಣವಾಗಿದೆ ಆದರೆ, ಕಡಿಮೆಯಾಗುವ ಸಾಧ್ಯತೆಯಿದೆ. ಫೆಬ್ರುವರಿಯ ಮೂರು ಮತ್ತು ನಾಲ್ಕನೇ ವಾರದಲ್ಲಿ ಬೇಸಿಗೆ ಪ್ರಾರಂಭವಾದಾಗ ಅದರ ಪರಿಣಾಮವು ಸ್ಪಷ್ಟವಾಗಿ ಕಂಡುಬಂದಿದೆ. ಇಲ್ಲದಿದ್ದರೆ ಅದು ಬೆಂಗಳೂರಿನಲ್ಲಿ ಮಾರ್ಚ್‌ನಲ್ಲಿ ಕಂಡುಬರುತ್ತಿತ್ತು ಎಂದು ಅವರು ವಿವರಿಸಿದರು.

ಈ ವರ್ಷ ಬೇಸಿಗೆ ಹೆಚ್ಚು ತೀವ್ರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ರಾಜ್ಯ ಸರ್ಕಾರವು ಮಾಡಿದ ಮೌಲ್ಯಮಾಪನದ ಪ್ರಕಾರ, ಮುಂಬರುವ ತಿಂಗಳುಗಳಲ್ಲಿ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಕರ್ನಾಟಕದಾದ್ಯಂತ ಸುಮಾರು 7,082 ಗ್ರಾಮಗಳು ಮತ್ತು 1,193 ವಾರ್ಡ್‌ಗಳು ಕುಡಿಯುವ ನೀರಿನ ಸಮಸ್ಯೆಗೆ ಗುರಿಯಾಗಲಿವೆ.

SCROLL FOR NEXT