ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ರಾಜ್ಯ

ಕರ್ನಾಟಕ ಅಗ್ನಿಶಾಮಕ ಇಲಾಖೆಗೂ ಸುಡುವ ಬೇಸಿಗೆ, ಬರ, ನೀರಿನ ಬವಣೆ; ಕಮಲ್ ಪಂತ್ ಕೊಟ್ಟ ಸಲಹೆ ಏನು?

Ramyashree GN

ಬೆಂಗಳೂರು: ಬಿರು ಬೇಸಿಗೆಯ ಪರಿಣಾಮವಾಗಿ ಬಹುತೇಕ ಕೆರೆಗಳು ಮತ್ತು ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಇದು ಕೇವಲ ನಾಗರಿಕರ ಮೇಲೆ ಪರಿಣಾಮ ಬೀರುವುದಷ್ಟೇ ಅಲ್ಲದೆ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಆತಂಕಕ್ಕೂ ಕಾರಣವಾಗಿದೆ. ಏಕೆಂದರೆ ಬೇಸಿಗೆಯಲ್ಲಿ ಸಾಮಾನ್ಯವಾಗಿ ಬೆಂಕಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತವೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್, ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಲಾಖೆಯು ಸಾಮಾನ್ಯವಾಗಿ ಕೆರೆಗಳು ಮತ್ತು ಇತರ ಜಲಮೂಲಗಳಿಂದ ನೀರನ್ನು ಪಡೆಯುತ್ತಿದೆ. ಸಮೀಪದ ಕೆರೆಗಳು ಮತ್ತು ಜಲಮೂಲಗಳಿಂದ ನೀರನ್ನು ತುಂಬಿಸಲು ನಾವು ವಿಶೇಷ ಸಾಧನಗಳನ್ನು ಹೊಂದಿದ್ದೇವೆ ಎಂದರು.

ಈ ಪ್ರದೇಶದಲ್ಲಿ ಲಭ್ಯವಿರುವ ತೊಟ್ಟಿಗಳು ಮತ್ತು ಬೋರ್‌ವೆಲ್‌ಗಳನ್ನು ಸಹ ಅಗ್ನಿಶಾಮಕ ಯಂತ್ರಗಳಿಗೆ ನೀರನ್ನು ತುಂಬಲು ಬಳಸಲಾಗುತ್ತದೆ. ಆದರೆ, ಬೇಸಿಗೆ ಇದೇ ರೀತಿ ಮುಂದುವರಿದರೆ ಗ್ರಾಮೀಣ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಮೂಲಗಳು ಬತ್ತಿ ಹೋಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ, ನಾವು ಕೆಲವು ತೊಂದರೆಗಳನ್ನು ಎದುರಿಸಬಹುದು ಮತ್ತು ನಾವು ದೂರದ ಸ್ಥಳಗಳಿಂದ ನೀರನ್ನು ತರುವಂತಾಗಬಹುದು. ಇದೊಂದು ಸವಾಲಾಗಿ ಪರಿಣಮಿಸುತ್ತದೆ ಎಂದು ಅವರು ಹೇಳಿದರು.

15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ಕೇಂದ್ರ ಸರ್ಕಾರದ ನೀತಿಯಿಂದಾಗಿ 64 ಅಗ್ನಿಶಾಮಕ ವಾಹನಗಳನ್ನು ರಸ್ತೆಗಿಳಿಸಿಲ್ಲ. ಕೆಲವು ಸ್ಥಳಗಳಲ್ಲಿ, ನಾವು ಕೇವಲ ಒಂದು ಅಗ್ನಿಶಾಮಕ ವಾಹನವನ್ನು ಹೊಂದಿದ್ದೇವೆ. ಇದು ಕೂಡ ಸಮಸ್ಯೆಯಾಗಿದೆ. ಆದಾಗ್ಯೂ, ಇಲ್ಲಿಯವರೆಗೆ ಎಲ್ಲವನ್ನೂ ಚೆನ್ನಾಗಿ ನಿರ್ವಹಿಸಲಾಗಿದೆ ಎಂದು ಪಂತ್ ವಿವರಿಸಿದರು.

ಬೆಂಗಳೂರಿನ ಪರಿಸ್ಥಿತಿ ಮತ್ತು ಬೇಸಿಗೆಯಲ್ಲಿ ಇಲಾಖೆ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದ ಅವರು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ನಮ್ಮ ಇಲಾಖೆಗೆ ನೀರು ಸರಬರಾಜು ಮಾಡುವ ಬಗ್ಗೆ ಗಮನ ವಹಿಸುತ್ತಿದೆ. ಇಲಾಖೆಯು ಈ ಹಿಂದೆ ಯಾವುದೇ ತೊಂದರೆಯನ್ನು ಎದುರಿಸಿಲ್ಲ. ಯಾವುದೇ ಪ್ರಮುಖ ತುರ್ತು ಸಂದರ್ಭದಲ್ಲಿ, ನಾವು ನಮ್ಮ ಶೇಖರಣಾ ವ್ಯವಸ್ಥೆಯನ್ನು ಹೊಂದಿದ್ದೇವೆ. ಪ್ರತಿಯೊಂದು ನಿಲ್ದಾಣದಿಂದಲೂ ನಾವು ನೀರು ಪಡೆಯುತ್ತೇವೆ. ಅಲ್ಲಿ ಪ್ರತಿಯೊಂದರಲ್ಲೂ ಶೇಖರಣಾ ಟ್ಯಾಂಕ್‌ಗಳಿವೆ. ಪ್ರತಿ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಶೇಖರಣಾ ತೊಟ್ಟಿ ಇರಬೇಕು. ಅಪಾರ್ಟ್‌ಮೆಂಟ್ ಮತ್ತು ವಾಣಿಜ್ಯ ಸಂಕೀರ್ಣಗಳು ಸಾಕಷ್ಟು ನೀರು ಇರುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಬೇಸಿಗೆ ತಿಂಗಳುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಡ್ಗಿಚ್ಚುಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅರಣ್ಯ ಇಲಾಖೆಯು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ ಮತ್ತು ತಮ್ಮ ಇಲಾಖೆಯು ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ. ಬೇಸಿಗೆಯಲ್ಲಿ ಹೆಚ್ಚಿನ ಜಾತ್ರೆಗಳು ನಡೆಯುವುದರಿಂದ ಸಾಕಷ್ಟು ಅಗ್ನಿಶಾಮಕ ವಾಹನಗಳು ಮತ್ತು ಮಾನವಶಕ್ತಿಯನ್ನು ಸೇವೆಗೆ ಒಳಪಡಿಸಲಾಗುವುದು. ಜನರು ಜಾಗೃತರಾಗಿರಬೇಕು ಮತ್ತು ಬೆಂಕಿಕಡ್ಡಿ, ಸಿಗರೇಟ್‌ನಂತಹ ಸುಡುವ ವಸ್ತುಗಳನ್ನು ಕೊಂಡೊಯ್ಯಬಾರದು ಎಂದು ಅವರು ಹೇಳಿದರು.

SCROLL FOR NEXT