ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ನೇಜಾರು ನಾಲ್ವರು ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಆರೋಪಿ ಹಾಜರುಪಡಿಸುವ ವೇಳೆ ಅಧಿಕಾರಿ ಪಾನಮತ್ತ; ಕ್ರಮಕ್ಕೆ ಸೂಚನೆ

Manjula VN

ಉಡುಪಿ: ನೇಜಾರ ನಾಲ್ವರು ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಅಧಿಕಾರಿಯೊಬ್ಬರು ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸಿದ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದ ನಾಲ್ವರ ಹತ್ಯೆ ಪ್ರಕರಣದ ಆರೋಪಿ ಪ್ರವೀಣ್‌ ಅರುಣ್‌ ಚೌಗುಲೆಯನ್ನು ನ್ಯಾಯಾಲಯಕ್ಕೆ ಕರೆ ತರುವ ಭದ್ರತೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಬೆಂಗಳೂರಿನ ಮೀಸಲು ಪೊಲೀಸ್‌ ವಿಭಾಗದ ಸಬ್‌ ಇನ್‌ಸ್ಪೆಕ್ಟರ್‌ ಕರ್ತವ್ಯದ ವೇಳೆಯಲ್ಲಿ ಮದ್ಯ ಸೇವಿಸಿ ಬಂದಿರುವ ಬಗ್ಗೆ ಆರೋಪ ಕೇಳಿ ಬಂದಿದೆ,

ಅಧಿಕಾರಿಯು ಸಮವಸ್ತ್ರವನ್ನು ಕೂಡ ಸಮರ್ಪಕವಾಗಿ ಧರಿಸದೆ ಇರುವುದು ಹಾಗೂ ಕರ್ತವ್ಯದಲ್ಲಿದ್ದ ವೇಳೆ ಮದ್ಯ ಸೇವನೆ ಮಾಡಿರುವುದು ಹಾಗೂ ಮಾಧ್ಯಮದ ಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ಈ ಬಗ್ಗೆ ಸ್ಥಳದಲ್ಲಿದ್ದವರು ಉಡುಪಿ ಎಸ್ಪಿಯ ಗಮನಕ್ಕೆ ತಂದಿದ್ದು, ಶಿಸ್ತು ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುತ್ತದೆ ಎಂದು ಉಡುಪಿ ಪೊಲೀಸ್‌ ಅಧೀಕ್ಷಕ ಡಾ. ಕೆ. ಅರುಣ್‌ ಅವರು ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಆರೋಪ ನಿರಾಕರಿಸಿದ ಆರೋಪಿ

ಪ್ರಕರಣ ಸಂಬಂಧ ಪ್ರವೀಣ್‌ ಅರುಣ್‌ ಚೌಗುಲೆ (39) ನನ್ನು ಪೊಲೀಸರು ಬಿಗಿ ಭದ್ರತೆಯಲ್ಲಿ ಬುಧವಾರ ಉಡುಪಿ ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯದ ಮುಂದೆ ಆರೋಪಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆಂದು ತಿಳಿದುಬಂದಿದೆ.

ಆರೋಪಿ ಮೇಲಿನ ಆಪಾದನೆ ವಾಚಿಸುವ ಪ್ರಕ್ರಿಯೆಗೆ ಮುನ್ನ ಪ್ರವೀಣ್‌ ಚೌಗುಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಅದರಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದ ಆರೋಪಿ ಚೌಗುಲೆಯನ್ನು ಬಿಗಿ ಪೊಲೀಸ್‌ ಭದ್ರತೆಯಲ್ಲಿ ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್‌ ವೃತ್ತ ನಿರೀಕ್ಷಕ ಕೃಷ್ಣ ಎಸ್‌. ಕೆ. ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಈ ಸಂದರ್ಭ ನ್ಯಾಯಾಧೀಶರಾದ ದಿನೇಶ್‌ ಹೆಗ್ಡೆ ಆರೋಪಿ ಮೇಲಿನ ಅಪಾದನೆಯನ್ನು ವಾಚಿಸಿದರು. ಆಗ ಆರೋಪಿ ಪ್ರವೀಣ್‌ ಅರುಣ್‌ ಚೌಗುಲೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಏಪ್ರಿಲ್ 5 ರಂದು ಪ್ರಿ ಟ್ರಯಲ್‌ ಕಾನ್ಫರೆನ್ಸ್‌ ನಡೆಸಲು ತೀರ್ಮಾನಿಸಲಾಗಿದೆ.

SCROLL FOR NEXT