ರಾಮೇಶ್ವರಂ ಕೆಫೆ ಸ್ಫೋಟ ಶಂಕಿತ ವ್ಯಕ್ತಿ
ರಾಮೇಶ್ವರಂ ಕೆಫೆ ಸ್ಫೋಟ ಶಂಕಿತ ವ್ಯಕ್ತಿ 
ರಾಜ್ಯ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಸಂಚು ರೂಪಿಸಿದ್ದ ಪ್ರಮುಖ ಆರೋಪಿ ಬಂಧನ

Srinivas Rao BV

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಚು ರೂಪಿಸಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಎನ್ಐಎ ಯಶಸ್ವಿಯಾಗಿದೆ. 3 ರಾಜ್ಯಗಳ 18 ಸ್ಥಳಗಳಲ್ಲಿ ದಾಳಿ ನಡೆಸಿದ ಬಳಿಕ ಮುಝಮ್ಮಿಲ್ ಶರೀಫ್ ಎಂಬಾತನನ್ನು ಎನ್ಐಎ ಬಂಧಿಸಿದೆ.

ಕರ್ನಾಟಕದ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ತಂಡಗಳು ದಾಳಿ ನಡೆಸಿದ ನಂತರ ಶರೀಫ್‌ನನ್ನು ಬೆಂಗಳೂರಿನಿಂದ ಕರೆದೊಯ್ದು ಸಹ ಸಂಚುಕೋರನೆಂದು ಪರಿಗಣಿಸಿ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಎನ್‌ಐಎ ಗುರುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ಬ್ರೂಕ್‌ಫೀಲ್ಡ್‌ನ ಐಟಿಪಿಎಲ್ ರಸ್ತೆಯಲ್ಲಿರುವ ಜನನಿಬಿಡ ಜನಪ್ರಿಯ ರೆಸ್ಟೋರೆಂಟ್‌ನಲ್ಲಿ ಮಾರ್ಚ್ 1 ರಂದು ಹ್ಯಾಂಡ್‌ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡ ನಂತರ ನೌಕರರು ಮತ್ತು ಗ್ರಾಹಕರು ಸೇರಿದಂತೆ ಒಂಬತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಆಸ್ತಿಪಾಸ್ತಿಗೂ ಹಾನಿಯಾಗಿದೆ.

ಮಾರ್ಚ್ 3 ರಂದು ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಎನ್ ಐಎ, ಸ್ಫೋಟ ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಹುಸೇನ್ ನನ್ನು ಈ ಹಿಂದೆ ಗುರುತಿಸಿತ್ತು. ಇತರ ಪ್ರಕರಣಗಳಲ್ಲಿ ಏಜೆನ್ಸಿಗೆ ಬೇಕಾಗಿರುವ ಮತ್ತೊಬ್ಬ ಸಂಚುಕೋರ ಅಬ್ದುಲ್ ಮಥೀನ್ ತಾಹಾ ಎಂಬಾತನನ್ನೂ ಅದು ಗುರುತಿಸಿತ್ತು. ಇಬ್ಬರೂ ಪರಾರಿಯಾಗಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

ಪ್ರಕರಣದಲ್ಲಿ ಗುರುತಿಸಲಾದ ಇತರ ಇಬ್ಬರು ಆರೋಪಿಗಳಿಗೆ ಷರೀಫ್ ಲಾಜಿಸ್ಟಿಕ್ ಬೆಂಬಲವನ್ನು ನೀಡಿದ್ದ ಎಂದು ಈ ವರೆಗಿನ ಎನ್ಐಎ ತನಿಖೆಗಳು ಬಹಿರಂಗಪಡಿಸಿವೆ. ಈ ಮೂವರು ಆರೋಪಿಗಳ ಮನೆಗಳು ಹಾಗೂ ಇತರ ಶಂಕಿತರ ಮನೆಗಳು ಮತ್ತು ಅಂಗಡಿಗಳ ಮೇಲೆ ಇಂದು ದಾಳಿ ನಡೆಸಲಾಯಿತು. ತಪಾಸಣೆಯ ವೇಳೆ ನಗದು ಸಹಿತ ವಿವಿಧ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಮತ್ತು ಸ್ಫೋಟದ ಹಿಂದಿನ ದೊಡ್ಡ ಪಿತೂರಿಯನ್ನು ಬಯಲಿಗೆಳೆಯಲು ಕೇಂದ್ರ ಭಯೋತ್ಪಾದನಾ ನಿಗ್ರಹ ಸಂಸ್ಥೆ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ.

SCROLL FOR NEXT