ಬೆಂಗಳೂರು: ತಮ್ಮ ಮೇಲಿನ ಆರೋಪ ಮತ್ತು ಬಂಧನ ಪ್ರಕರಣದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ನೀಡಿರುವ ಹೇಳಿಕೆ, ಪ್ರಧಾನ ಮಂತ್ರಿಯವರಿಗೆ ಸಿಎಂ ಪತ್ರ ನೋಡಿದರೆ ಇದು ದುರುದ್ದೇಶಪೂರಿತ ಎಸ್ ಐಟಿ ತನಿಖೆ ಎಂದು ಸ್ಪಷ್ಟವಾಗುತ್ತದೆ ಎಂದು ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಆರೋಪಿಸಿದ್ದಾರೆ.
ರೇವಣ್ಣ ಅವರು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಈ ವಿಚಾರ ನಮೂದಿಸಿದ್ದಾರೆ. ತಮ್ಮ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಕ್ಕೂ ಮುನ್ನ ಮತ್ತು ನಂತರದ ಬೆಳವಣಿಗೆಗಳನ್ನು ಉಲ್ಲೇಖಿಸಿದ ರೇವಣ್ಣ, ಎಸ್‌ಐಟಿ ತನಿಖೆಯಲ್ಲಿ ಪ್ರಾಮಾಣಿಕತೆಯ ಕೊರತೆಯಿದ್ದು, ತಮ್ಮನ್ನು ಬಂಧಿಸುವುದು ಮತ್ತು ತಮ್ಮ ಮತ್ತು ತಮ್ಮ ಕುಟುಂಬ ಸದಸ್ಯರನ್ನು ಅವಮಾನಿಸುವುದು ಏಕೈಕ ಉದ್ದೇಶವಾಗಿದೆ ಎಂದು ಕಾಣುತ್ತಿದೆ ಎಂದರು.
ತಾವು ಮೊದಲ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದಾಗ ಜಾಮೀನು ರಹಿತ ಅಪರಾಧ ಎಸಗಿಲ್ಲ ಎಂದು ಎಸ್‌ಐಟಿ ಹೇಳಿದ್ದರೂ, ನಂತರ ಅದನ್ನು ಹಿಂಪಡೆಯಲಾಗಿದೆ, ಮಹಿಳೆಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ ಮತ್ತೊಂದು ಪ್ರಕರಣವನ್ನು ದಾಖಲಿಸಲಾಗಿದೆ, ಏನಿದರ ಅರ್ಥ ಎಂದು ಪ್ರಶ್ನಿಸಿದ್ದಾರೆ.
ರೇವಣ್ಣ ಅವರನ್ನು ಬಂಧಿಸಿ ಕನಿಷ್ಠ ಎರಡು ತಿಂಗಳ ಕಾಲ ಜೈಲಿನಲ್ಲಿ ಇಡಲಾಗುವುದು ಎಂದು ಡಿಸಿಎಂ ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ರೇವಣ್ಣ ಪರ ವಕೀಲರು ನಿನ್ನೆ ನ್ಯಾಯಾಲಯದಲ್ಲಿ ಹೇಳಿದರು. ಇದು ತನಿಖೆಯ ನಿಜವಾದ ಉದ್ದೇಶವನ್ನು ಸೂಚಿಸುತ್ತದೆ. ರೇವಣ್ಣ ಮತ್ತು ಅವರ ಕುಟುಂಬವನ್ನು ಒಂದಲ್ಲ ಒಂದು ನೆಪದಲ್ಲಿ ಅವಮಾನ ಮಾಡುವುದನ್ನು ಎಸ್‌ಐಟಿಯ ಗುರಿಯಾಗಿಸಿದೆ ಎಂದು ಹೇಳಿದರು.