ಬೆಂಗಳೂರು: ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಪಾಲಾಗಿರುವ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.
ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಹೆಚ್.ಡಿ. ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನಗರದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ನಡೆಯಿತು. ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ. ವಿ. ನಾಗೇಶ್, ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ರೇವಣ್ಣ ಪಾತ್ರವಿಲ್ಲ. ಅವರ ವಿರುದ್ಧ ಐಪಿಸಿ ಸೆಕ್ಷನ್ 364 ಅಡಿಯಲ್ಲಿ ಪ್ರಕರಣ ದಾಖಲಿಸುವ ಅಗತ್ಯವಿರಲಿಲ್ಲ ಎಂದರು.
ಸುಳ್ಳು ಹೇಳಿ ತಾಯಿಯನ್ನು ಕರೆದೊಯ್ದರು ಎಂದು ಸಂತ್ರಸ್ತೆ ಮಗ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಆಕೆಗೆ ಸುಳ್ಳು ಹೇಳಿ ವಂಚಿಸಿರುವ ಆರೋಪ ಅಪಹರಣ ಆಗುವುದಿಲ್ಲ. ಸಿಎಂ ಹೇಳಿದ್ದಾರೆ ಎಂದು ಕರೆದೊಯ್ದರೆ ಸಿಎಂ ಬಂಧಿಸಬೇಕೆ ಎಂದು ಪ್ರಶ್ನಿಸಿದ ವಕೀಲರು, ರೇವಣ್ಣ ಬಲ ಪ್ರಯೋಗ ಅಥವಾ ಮೋಸ ಮಾಡಿ ಕರೆದೊಯ್ದಿರುವ ಆರೋಪ ಇಲ್ಲ. ಆದಾಗ್ಯೂ, ಅವರನ್ನು ನಂಬರ್ 1 ಆರೋಪಿಯನ್ನಾಗಿ ಮಾಡಲಾಗಿದ್ದು, ಅವರಿಗೆ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಯ್ನಾ ಕೊಠಾರಿ, ವಾದ ಮಂಡಿಸಲು ಕಾಲಾವಕಾಶಕ್ಕೆ ನ್ಯಾಯಾಲಯವನ್ನು ಕೋರಿದರು. ಇದರಿಂದಾಗಿ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್, ಮುಂದಿನ ವಿಚಾರಣೆಯನ್ನು ಸೋಮವಾರ ಬೆಳಗ್ಗೆ 11-30ಕ್ಕೆ ಮುಂದೂಡಿದರು. ಇದರಿಂದಾಗಿ ಇನ್ನೂ ಮೂರು ದಿನಗಳ ಕಾಲ ರೇವಣ್ಣ ಅವರು ಜೈಲಿನಲ್ಲಿ ಇರಬೇಕಾಗಿದೆ.