ಬೆಳಗಾವಿ: ತನ್ನನ್ನು ಮದುವೆಯಾಗುವಂತೆ ಅಪ್ರಾಪ್ತ ಬಾಲಕಿಯನ್ನು ಒತ್ತಾಯಿಸುತ್ತಿದ್ದ ಯುವಕನನ್ನು ಮತ್ತು ಆತನ ರಕ್ಷಣೆಗೆ ಧಾವಿಸಿದ ಹಿರಿಯ ಸೋದರನನ್ನು ಬಾಲಕಿಯ ತಂದೆ ಹತ್ಯೆಗೈದಿರುವ ಘಟನೆ ಸವದತ್ತಿ ತಾಲ್ಲೂಕಿನ ದುಂಡನಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತ ಯುವಕರನ್ನು ಸವದತ್ತಿ ತಾಲ್ಲೂಕಿನ ದುಂಡನಕೊಪ್ಪ ಗ್ರಾಮದ ಮಾಯಪ್ಪ ಸೋಮಪ್ಪ ಹಳೇಗುಡಿ (20) ಮತ್ತು ಅವರ ಅಣ್ಣ ಯಲ್ಲಪ್ಪ ಸೋಮಪ್ಪ ಹಳೆಗುಡಿ (22) ಎಂದು ಗುರುತಿಸಲಾಗಿದೆ. ಆರೋಪಿಯನ್ನು ದುಂಡನಕೊಪ್ಪ ಗ್ರಾಮದ ನಿವಾಸಿ ಫಕೀರಪ್ಪ ಮಾರುತಿ ಭಾವಿಹಾಳ್ (50) ಎಂದು ಗುರುತಿಸಲಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ, ಆರೋಪಿ ಫಕೀರಪ್ಪನಿಗೆ ಮಗಳಿದ್ದಾಳೆ. ಸಂತ್ರಸ್ತ ಮಾಯಪ್ಪ ಅಪ್ರಾಪ್ತ ಬಾಲಕಿಯನ್ನು ತಾನು ಪ್ರೀತಿಸುತ್ತಿರುವುದಾಗಿಯೂ ಮತ್ತು ಆಕೆಗೂ ತನ್ನ ಮೇಲೆ ಪ್ರೀತಿ ಇರುವುದಾಗಿಯೂ ಆಕೆಯ ಪೋಷಕರಿಗೆ ಹೇಳುತ್ತಿದ್ದ. ಆಕೆಯನ್ನು ಮದುವೆ ಮಾಡಿಕೊಡುವಂತೆ ಪದೇ ಪದೆ ಒತ್ತಾಯಿಸುತ್ತಿದ್ದ.
ಮೃತರು ಪದೇ ಪದೇ ಈ ವಿಷಯವನ್ನು ಪ್ರಸ್ತಾಪಿಸಿ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದರು. ಈತನ ವರ್ತನೆಯಿಂದ ಕೋಪಗೊಂಡ ಫಕೀರಪ್ಪ ಮಂಗಳವಾರ ರಾತ್ರಿ ಮತ್ತೊಮ್ಮೆ ಪ್ರಸ್ತಾವನೆಯೊಂದಿಗೆ ಬಂದಾಗ ಮಾಯಪ್ಪನ ಎದೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾರೆ, ಇದನ್ನು ತಡೆಯಲು ಯತ್ನಿಸಿದ ಅಣ್ಣ ಯಲ್ಲಪ್ಪನಿಗೂ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಮುರಗೋಡು ಠಾಣೆಯ ಪೊಲೀಸರು ಆಗಮಿಸಿ ಯಲ್ಲಪ್ಪನನ್ನು ಗ್ರಾಮಸ್ಥರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದ್ದು, ಮಾಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಯಲ್ಲಪ್ಪ ಬುಧವಾರ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಫಕೀರಪ್ಪನನ್ನು ಬಂಧಿಸಿರುವ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.