ಬೆಂಗಳೂರು: ‘ಸೂಪರ್ 60’ ಯೋಜನೆಯಡಿ ಎಸ್ ಎಸ್ ಎಲ್ ಸಿ ಓದುತ್ತಿರುವ 60 ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಯಿತು. ತರಬೇತಿ ಪಡೆದ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಗೆ ಮತ್ತು ತಮ್ಮ ಸಂಸ್ಥೆಗಳಿಗೆ ಹೆಮ್ಮೆ ತಂದಿದ್ದಾರೆ ಎಂದು ಪರಿಶ್ರಮ ನೀಟ್ ಅಕಾಡೆಮಿ ತಿಳಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಶಾಸಕ ಪ್ರದೀಪ್ ಈಶ್ವರ್ ಅವರು ಜಿಲ್ಲೆಯಲ್ಲಿ ‘ಸೂಪರ್ 60’ ಎಂಬ ವಿನೂತನ ಯೋಜನೆಯನ್ನು ರೂಪಿಸಿದ್ದಾರೆ ಎಂದು ಅಕಾಡೆಮಿ ತಿಳಿಸಿದೆ. ಇದರಡಿ ಚಿಕ್ಕಬಳ್ಳಾಪುರ ಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ಕುಟುಂಬದ 60 ಮಕ್ಕಳು, ಅನಾಥರು ಮತ್ತು ಒಂಟಿ ಪೋಷಕರ ಮಕ್ಕಳನ್ನು ಆಯ್ಕೆ ಮಾಡಿ ಅನುಮತಿಯೊಂದಿಗೆ ತರಬೇತಿ ನೀಡಲಾಯಿತು.
ಶಾಸಕರ ಯೋಜನೆಯು ಅಭೂತಪೂರ್ವ ಯಶಸ್ಸನ್ನು ಕಂಡಿದೆ ಎಂದು ಎಸ್‌ಎಸ್‌ಎಲ್‌ಸಿ ಫಲಿತಾಂಶಗಳು ತೋರಿಸಿವೆ. ಶಾಸಕ ಪ್ರದೀಪ್ ಈಶ್ವರ್ ಅವರು ವಿದ್ಯಾರ್ಥಿಗಳನ್ನು ಖುದ್ದು ಭೇಟಿಯಾಗಿ ಯೋಜನೆಯಡಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾದವರನ್ನು ಅಭಿನಂದಿಸಿದರು.‘‘ಯಾವುದೇ ಕುಟುಂಬದ ಜೀವನಮಟ್ಟ ಅಭಿವೃದ್ಧಿಯಾಗಬೇಕು ಎಂದರೆ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎಂಬ ಅಂಶವನ್ನು ಗುರುತಿಸಿ ಸೂಪರ್ 60 ಯೋಜನೆ ಆರಂಭಿಸಲಾಗಿದೆ ಎಂದರು.
3,000 ವಿದ್ಯಾರ್ಥಿಗಳಿಗೆ ಶಾಸಕರು 1,000 ರೂಪಾಯಿಗಳ ವಿದ್ಯಾರ್ಥಿವೇತನವನ್ನು ನೀಡಿದರು ಎಂದು ಅಕಾಡೆಮಿ ತಿಳಿಸಿದೆ.