ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನೂ ವಿಚಾರಣೆಗೊಳಪಡಿಸಬಹುದು ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿದ್ದಾರೆ.
ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಅವರು, 'ರಾಜಕೀಯ ನಾಯಕರು ಸಾರ್ವಜನಿಕ ಹೇಳಿಕೆಗಳನ್ನು ನೀಡುವಾಗ ಅಥವಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಹಂಚಿಕೊಳ್ಳುವಾಗ ಎಚ್ಚರದಿಂದಿರಬೇಕು. ಇದು ಸೂಕ್ಷ್ಮ ವಿಚಾರವಾಗಿದ್ದು, ಜವಾಬ್ದಾರಿ ಅರಿತು ಮಾತನಾಡಬೇಕು.
ಹೆಚ್ ಡಿ ಕುಮಾರಸ್ವಾಮಿ ಅವರು ಮಾಜಿ ಸಿಎಂ ಆಗಿದ್ದು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರಕರಣದ ಕುರಿತು ಯಾವುದೇ ಹೇಳಿಕೆಗಳನ್ನು ನೀಡುವ ಮೊದಲು ಅಥವಾ ಸಾರ್ವಜನಿಕವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಜಾಗರೂಕರಾಗಿರಬೇಕು ಮತ್ತು ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದರು.
ಅಂತೆಯೇ ಮಾತನಾಡುವಾಗ ಈ ಬಗ್ಗೆ ಎಚ್ಚರಿಕೆ ಇರಬೇಕು. ಬಾಯಿಗೆ ಬಂದಂತೆ ಹೇಳಿಕೆ ನೀಡಿದರೆ ಕಾನೂನು ಪ್ರಕಾರ ನಿಮ್ಮನ್ನೂ ಕರೆಸಿ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
'ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರು ಯಾರೋ, ಏನೇನನ್ನೋ ಹೇಳುತ್ತಾರೆ. ಪ್ರತಿಯೊಂದು ಸಾರ್ವಜನಿಕ ಹೇಳಿಕೆಗಳಿಗೆ ನಾವು ಉತ್ತರ ಕೊಡುವುದಕ್ಕೆ ಆಗಲ್ಲ. ಇದು ಗಂಭೀರವಾದ ಪ್ರಕರಣ ಆಗಿರುವುದರಿಂದ ಇದರ ತನಿಖೆ ಪೂರ್ಣಗೊಳ್ಳುವವರೆಗೂ ಕೂಡ ಯಾವುದೇ ಮಾಹಿತಿಯನ್ನು ಸಾರ್ವಜನಿಕ ವಲಯಕ್ಕೆ ತಿಳಿಸಲು ಆಗುವುದಿಲ್ಲ.
ಈ ಕೇಸ್ ಬಗ್ಗೆ ಸಾರ್ವಜನಿಕರಾಗಲೀ ಅಥವಾ ರಾಜಕೀಯ ನಾಯಕರಾಗಾಲೀ, ಯಾವುದೇ ಹೇಳಿಕೆಗಳನ್ನು ಕೊಡುವಾಗ ಎಚ್ಚರಿಕೆಯಿಂದ ಕೊಡಬೇಕು. ಈ ವಿಚಾರದ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವವರ ಮೇಲೆಯೂ ಕ್ರಮ ಆಗುತ್ತದೆ. ಯಾವುದೇ ರೀತಿಯ ಹೇಳಿಕೆ ಕೊಟ್ಟರೆ 41A ಪ್ರಕಾರ ಅವರನ್ನು ಕೂಡ ವಿಚಾರಣೆಗೆ ಕರೆಯಬೇಕಾಗುತ್ತದೆ.
ಎಚ್.ಡಿ. ಕುಮಾರಸ್ವಾಮಿ ಪದೇ ಪದೆ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಈ ವಿಷಯವನ್ನು ಅವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ಪರಮೇಶ್ವರ್ ಹೇಳಿದರು.