ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ವಿದೇಶದಲ್ಲಿದ್ದುಕೊಂಡು ಕಣ್ಣಾಮುಚ್ಚಾಲೆ ಆಟ ಮುಂದುವರಿಸಿದ್ದಾರೆ. ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್ನಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದರು. ಲುಪ್ತಾನ್ಸಾ ವಿಮಾನದಲ್ಲಿ ಈ ಟಿಕೆಟ್ ಕ್ಯಾನ್ಸಲ್ ಮಾಡಿದ್ದ ಅವರು, ಮತ್ತೆ ಬುಕ್ ಮಾಡಿದ್ದಾರೆಂದು ತಿಳಿದುಬಂದಿದೆ. ಈ ವಿಮಾನ ಇಂದು ಮಧ್ಯಾಹ್ನ 2 ಗಂಟೆಗೆ ಹೊರಡಲಿದ್ದು, ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸಲಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಚಲನ ವಲನಗಳ ಮೇಲೆ ನಿಗಾ ಇಟ್ಟಿರುವ ಎಸ್ಐಟಿ ತಂಡ ಅಲರ್ಟ್ ಆಗಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಬೀಡುಬಿಟ್ಟಿದೆ.
ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿತಿಗಳು, ಬರಹಗಾರರು, ಮಹಿಳಾ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಪತ್ತೆ ಮಾಡಿ ಬಂಧಿಸಬೇಕು. ಕಾಲಮಿತಿಯಲ್ಲಿ ಎಸ್ಐಟಿ ತನಿಖೆ ನಡೆಯಬೇಕು ಎನ್ನುವುದು ಸೇರಿದಂತೆ 16 ಬೇಡಿಕೆಗಳನ್ನೊಳಗೊಂಡ ಪತ್ರಕ್ಕೆ ಹಿರಿಯ ಲೇಖಕರಾದ ವಸುಂಧರಾ ಭೂಪತಿ, ಕುಂ ವೀರಭದ್ರಪ್ಪ, ಮುಜಫರ್ ಅಸ್ಸಾದಿ ಸೇರಿದಂತೆ ಒಟ್ಟು 107 ಮಂದಿ ಸಹಿ ಮಾಡಿದ್ದಾರೆ. ಇದನ್ನು ಪ್ರಜ್ಞಾವಂತ ನಾಗರಿಕರ ಬಹಿರಂಗ ಪತ್ರ ಎಂದು ಹೆಸರಿಸಲಾಗಿದೆ. ಪ್ರಜ್ವಲ್ ರೇವಣ್ಣ ಪ್ರಕರಣವು ಅತ್ಯಂತ ಹೇಯವಾಗಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಹುದಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಕೋವಿಡ್ -19, ನಿಫಾ, ಹಕ್ಕಿಜ್ವರ, ಹಂದಿಜ್ವರ ನಂತರ ಈಗ ವೆಸ್ಟ್ ನೈಲ್ ಜ್ವರದ ಭೀತಿ ಕಾಡುತ್ತಿದೆ. ಕೇರಳದಲ್ಲಿ ವೆಸ್ಟ್ ನೈಲ್ ಜ್ವರ ಹೆಚ್ಚಾಗಿದ್ದು, ಮೈಸೂರು ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ ಡಿ ಕೋಟೆ ತಾಲ್ಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಗಡಿಯೊಳಗೆ ಬಂದು ಹೋಗುವ ವಾಹನಗಳ ಸವಾರರ ಮೇಲೆ ಕಟ್ಟೆಚ್ಚರ ವಹಿಸಿದ್ದಾರೆ. ವೆಸ್ಟ್ ನೈಲ್ ಜ್ವರ ಲಕ್ಷಣರಹಿತವಾಗಿದ್ದರೆ, ಕೆಲವರಲ್ಲಿ ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳಂತಹ ರೋಗ ಲಕ್ಷಣಗಳು ಕಂಡುಬರುತ್ತದೆ. ಎಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದು ಇಂತಹ ಲಕ್ಷಣಗಳು ಕಂಡು ಬಂದರೆ ಅದರ ಸ್ಯಾಂಪಲ್ ಅನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ರವಾನಿಸಲಾಗುತ್ತದೆ. ಮತ್ತೊಂದೆಡೆ ರಾಜ್ಯಕ್ಕೆ ಮಳೆಯ ಆಗಮನವಾಗಿದ್ದು ಇದರ ಬೆನ್ನಲ್ಲೇ ಇದೀಗ ಡೆಂಗ್ಯೂ ಭೀತಿ ಶುರುವಾಗಿದೆ. ರಾಜ್ಯದಲ್ಲಿ ಮೇ.13ರವರೆಗೆ ಒಟ್ಟು 2,877 ಪ್ರಕರಣಗಳು ವರದಿಯಾಗಿವೆ.
ನೇಹಾ ಹಿರೇಮಠ ಕೊಲೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಘಟನೆ ನಡೆದಿದೆ. ಇಂದು ಬೆಳಗ್ಗೆ ನಿದ್ದೆಯಲ್ಲಿದ್ದ ಯುವತಿಯನ್ನು ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಓಣಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಅಂಜಲಿ ಅಂಬಿಗೇರ ಎಂದು ಗುರುತಿಸಲಾಗಿದ್ದು, ವಿಶ್ವ ಅಲಿಯಾಸ್ ಗಿರೀಶ್ ಎಂಬಾತ ಯುವತಿಯನ್ನು ಹತ್ಯೆ ಮಾಡಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ. ತನ್ನನ್ನು ಪ್ರೀತಿಸುವಂತೆ ಅಂಜಲಿಯನ್ನು ಗಿರೀಶ್ ಪೀಡಿಸುತ್ತಿದ್ದ ಆದರೆ ಅಂಜನಿ ತನ್ನ ಪ್ರೀತಿಯನ್ನು ನಿರಾಕರಿಸಿದ್ದರಿಂದ ಕ್ರೋಧಗೊಂಡ ಗಿರೀಶ್ ಆಕೆಯನ್ನು ಹತ್ಯೆ ಮಾಡಿದ್ದಾನೆ. ಮತ್ತೊಂದು ಪ್ರಕರಣದಲ್ಲಿ, ಜೀವನಾಂಶದ ಕೇಸ್ ಹಿಂಪಡೆಯಲು ನಿರಾಕರಿಸಿದ ಪತ್ನಿಯನ್ನು ನಡುರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ. ರಾಜೇಶ್ ಎಂಬಾತ ಮಂಜುಳಾಳನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ನೈಋತ್ಯ ಮುಂಗಾರು ಪ್ರಾರಂಭವಾಗುವವರೆಗೆ ಹೆಚ್ಚಿನ ಗುಡುಗು ಮತ್ತು ಧೂಳು ಸಹಿತ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಆದರೆ ರಾಜ್ಯ ಮತ್ತು ದೇಶದಲ್ಲಿ ಯಾವುದೇ ಶಾಖದ ಅಲೆ ಎಚ್ಚರಿಕೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂಬೈನ ಘಾಟ್‌ಕೋಪರ್ ನಲ್ಲಿ ಅಕ್ರಮ ಹೋರ್ಡಿಂಗ್ ಬಿದ್ದು 14 ಮಂದಿ ಸಾವಿನ ಪ್ರಕರಣ ಉಲ್ಲೇಖಿಸಿರುವ ಇಲಾಖೆಯು, ಜನರಿಗೆ ಎಚ್ಚರಿಕೆ ನೀಡಿ ಸುರಕ್ಷಿತವಾಗಿರಲು ಸಲಹೆ ನೀಡಿದೆ. ಗುಡುಗು ಅಥವಾ ಧೂಳಿನ ಬಿರುಗಾಳಿಯಿಂದಾಗಿ ಇದೇ ರೀತಿಯ ಘಟನೆಗಳು ಸಂಭವಿಸಬಹುದು ಎಂದು ಹವಾಮಾನ ಇಲಾಖೆ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.