ಬೆಂಗಳೂರು: ಬಿಸಿಲ ಬೇಗೆ ಮತ್ತು ನೀರಿನ ಸಮಸ್ಯೆಯಿಂದ ಹೈರಾಣಾಗಿದ್ದ ಬೆಂಗಳೂರಿನಲ್ಲಿ ಮಳೆರಾಯ ಕೃಪೆ ತೋರಿದರೂ ನೀರಿನ ಸಮಸ್ಯೆ ಮಾತ್ರ ಇನ್ನೂ ನೀಗಿಲ್ಲ.. ಬೆನ್ಸನ್ ಟೌನ್ ಸತ್ತಮುತ್ತ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದು, ವಾರಕ್ಕೆ ಕೆಲವೇ ಗಂಟೆ ಮಾತ್ರ ನೀರು ಬರುತ್ತದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಬೆನ್ಸನ್ ಟೌನ್ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು, ಈ ಪ್ರದೇಶದಲ್ಲಿ ವಾರಕ್ಕೆ ಕೆಲವೇ ಗಂಟೆ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಹೀಗೆ ಸರಬರಾಜು ಮಾಡುವ ನೀರು ಯಾವಾಗ ಬರುತ್ತದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ. ನಿವಾಸಿಗಳು ಸದಾಕಾಲ ನಲ್ಲಿಗಳನ್ನು ತೆರೆದು ಅಲ್ಲಿ ಬಿಂದಿಗೆಗಳನ್ನು ಇಟ್ಟು ನೀರಿಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ. ನೀರಿಗಾಗಿಯೇ ತಮ್ಮ ಎಲ್ಲ ಕೆಲಸಗಳನ್ನೂ ಬಿಟ್ಟು ಕಾಯಬೇಕಾದ ಪರಿಸ್ಥಿತಿ ಇದ್ದು, ಇದರಿಂದ ರೋಸಿ ಹೋಗಿರುವ ಜನ ಅಧಿಕಾರಿಗಳಿಗೆ ಸೂಕ್ತ ಸಂದರ್ಭದಲ್ಲಿ ನೀರು ಬಿಡುವಂತೆ ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿ ಕುಂಬಾರ ರಾಜಶೇಖರ್, ಇಲ್ಲಿ ನೀರು ಯಾವಾಗ ಬರುತ್ತದೆ ಎಂದು ಯಾರಿಗೂ ತಿಳಿಯುವುದಿಲ್ಲ. ಹೀಗಾಗಿ ನಮ್ಮಲ್ಲಿ ಒಬ್ಬರು ಇಲ್ಲಿ ಯಾವಾಗಲೂ ನಲ್ಲಿ ತೆರೆದು ಅಲ್ಲಿ ಬಿಂದಿಗೆ ಇಟ್ಟಿರುತ್ತೇವೆ. ನೀರು ಜಿನುಗುವ ಶಬ್ದ ಕೇಳಿದ ಕೂಡಲೇ ಏರಿಯಾದ ಇತರೆ ಜನರಿಗೆ ಮಾಹಿತಿ ನೀಡುತ್ತೇವೆ. ಬಳಿಕ ಎಲ್ಲರೂ ಬಂದು ಒಬ್ಬರ ಬಳಿಕ ಒಬ್ಬರು ನೀರು ಹಿಡಿದುಕೊಳ್ಳುತ್ತಾರೆ ಎಂದು ಹೇಳಿದರು.
ಇಲ್ಲಿ ಸುಮಾರು 200 ಕುಟುಂಬಗಳಿವೆ. ಮತ್ತು ಪ್ರತಿ ಕುಟುಂಬವು ಕನಿಷ್ಠ ನಾಲ್ಕು ಸದಸ್ಯರನ್ನು ಹೊಂದಿದೆ. ಪ್ರತಿ ದಿನವೂ ನೀರು ಸರಬರಾಜು ಮಾಡಿದರೂ, ನಾವು ಎಷ್ಟು ಸಂಗ್ರಹಿಸಬಹುದು? ಎಂದು ಅವರು ಪ್ರಶ್ನಿಸಿದರು.
ಕಳೆದ ಒಂದು ತಿಂಗಳಿನಿಂದ ಈ ಪ್ರದೇಶದಲ್ಲಿ ನೀರು ಲಭ್ಯವಿದೆಯಾದರೂ, ಅದು ಯಾವಾಗ ಬರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಯಾವುದೇ ಮುನ್ಸೂಚನೆ ನೀಡದೆ ಪದೇ ಪದೇ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಮತ್ತೊಬ್ಬ ಕಾರ್ಮಿಕ ದೂರಿದ್ದಾರೆ. ಈ ಪ್ರದೇಶದಲ್ಲಿ ಕುಂಬಾರರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ, ಅವರ ಕಸುಬಿಗೆ ನೀರು ಅತಿ ಮುಖ್ಯ. ನೀರು ತುಂಬಿಸುವ ಮತ್ತು ಮನೆಯಲ್ಲಿ ಸಾಕಷ್ಟು ನೀರು ಇರುವುದನ್ನು ಖಾತ್ರಿಪಡಿಸುವ ನಿರಂತರ ಚಿಂತೆ ಅವರನ್ನು ತೊಂದರೆಗೊಳಿಸುತ್ತದೆ. ಇದು ಮಾನಸಿಕವಾಗಿ ಕುಗ್ಗಿಸುತ್ತದೆ ಮತ್ತು ನಮ್ಮ ಕೆಲಸವನ್ನು ಅಡ್ಡಿಪಡಿಸುತ್ತದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಬೆನ್ಸನ್ ಟೌನ್‌ನಲ್ಲಿ ಬೀದಿ ಆಹಾರದ ಅಂಗಡಿಯನ್ನು ನಿರ್ವಹಿಸುತ್ತಿರುವ ಸಲೀಂ ಅವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದು, 'ಅಂಗಡಿ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಬೋರ್‌ವೆಲ್ ನೀರನ್ನು ಬಳಸುತ್ತಿದ್ದೇವೆ. ಅಡುಗೆ ಮಾಡಲು ಕುಡಿಯುವ ನೀರಿನ ಅಗತ್ಯವಿದೆ. ಅದಕ್ಕೂ ನೀರು ಸಾಲುತ್ತಿಲ್ಲ. ಬೋರ್‌ವೆಲ್‌ಗಳು ಕಡಿಮೆ ನೀರನ್ನು ನೀಡುವುದರಿಂದ ಆ ನೀರು ಕೂಡ ಸಾಲುತ್ತಿಲ್ಲ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿಲ್ಲ. ಎಷ್ಟು ನೀರು ತುಂಬಬೇಕು, ಎಷ್ಟು ಸಂಗ್ರಹಿಸಬೇಕು ಮತ್ತು ಎಷ್ಟು ಸಮಯದವರೆಗೆ ನೀರಿಗಾಗಿ ಕಾಯಬೇಕು? ಎಂದು ಪ್ರಶ್ನಿಸಿದರು.
ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಪ್ರತಿಕ್ರಿಯೆಗೆ ಲಭ್ಯವಾಗುತ್ತಿಲ್ಲ.