ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೂಡುಗೋಪಾಡಿ ಗ್ರಾಮದಲ್ಲಿ 3 ದಿನಗಳ ಹಿಂದೆ ಮೃತಪಟ್ಟಿದ್ದ ತಾಯಿಯ ಶವದ ಜೊತೆ ಊಟ, ನೀರಿಲ್ಲದೆ ಒಬ್ಬಂಟಿಯಾಗಿ ದಿನ ಕಳೆದ ಬುದ್ಧಿಮಾಂದ್ಯ ಯುವತಿಯೊಬ್ಬಳು ಸ್ಥಳೀಯರ ಸಮಯಪ್ರಜ್ಞೆಯಿಂದ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಸಾವನ್ನಪ್ಪಿದ್ದಾಳೆ.
ಯುವತಿಯ ತಾಯಿ 62 ವರ್ಷ ವಯಸ್ಸಿನ ಜಯಂತಿ ಶೆಟ್ಟಿ ಮೂರು ದಿನಗಳ ಹಿಂದೆ ನಿಧನರಾಗಿದ್ದರು. ಆಕೆಯ ಮಾನಸಿಕ ಅಸ್ವಸ್ಥ ಮಗಳಾದ ಪ್ರಗತಿ ಶೆಟ್ಟಿ ತನ್ನ ತಾಯಿಯ ಮೃತದೇಹದ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು. ಈ ಬಗ್ಗೆ ಯಾರಿಗೂ ತಿಳಿದಿರಲಿಲ್ಲ.
ಜಯಂತಿ ಶೆಟ್ಟಿ ಅವರಿಗೆ ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆ ಇತ್ತು. ಅವರ ಮಗಳು ಪ್ರಗತಿ ಶೆಟ್ಟಿ ಕೂಡ ಮಧುಮೇಹದಿಂದ ಬಳಲುತ್ತಿದ್ದರು. ಮಧುಮೇಹದಿಂದ ಪ್ರಗತಿಯ ಸ್ಥಿತಿ ಹದಗೆಟ್ಟಿದ್ದರಿಂದ ಇತ್ತೀಚೆಗೆ ಒಂದು ಕಾಲು ಕತ್ತರಿಸಲಾಗಿತ್ತು. ಗುರುವಾರ ತಡರಾತ್ರಿ ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದ ಮನೆಯವರಿಗೆ ಅನುಮಾನ ಬಂದಿದೆ. ಬಳಿಕ ಜಯಂತಿ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಉತ್ತರ ಬಂದಿಲ್ಲ.
ಜಯಂತಿ ಶೆಟ್ಟಿ ದೂರವಾಣಿ ಕರೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ನೆರೆಹೊರೆಯವರು ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಪೊಲೀಸರು ಸ್ಥಳಕ್ಕೆ ಬಂದು, ಬಲವಂತವಾಗಿ ಬಾಗಿಲು ತೆರೆದಾಗ ಜಯಂತಿ ಅವರ ಮೃತದೇಹ ಪತ್ತೆಯಾಗಿದೆ. ಇದೇ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ ಮಗಳು ಪ್ರಗತಿ ಏದುಸಿರು ಬಿಡುತ್ತಿರುವುದು ಕಂಡು ಬಂದಿದೆ. ಕೂಡಲೇ ಪ್ರಗತಿ ಶೆಟ್ಟಿಯವರಿಗೆ ಕುಡಿಯಲು ಸ್ವಲ್ಪ ನೀರು ನೀಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾಳೆ.