ಬೆಂಗಳೂರು: ಮೈಸೂರಿನ ಯರಗನಹಳ್ಳಿಯಲ್ಲಿ ಎಲ್‌ಪಿಜಿ ಗ್ಯಾಸ್ ಸೋರಿಕೆಯಾಗಿ ಉಸಿರುಗಟ್ಟಿ ಸಾವಿಗೀಡಾದ ಒಂದೇ ಕುಟುಂಬದ ನಾಲ್ವರ ಸಂಬಂಧಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 12 ಲಕ್ಷ ರೂಪಾಯಿ (ತಲಾ 3 ಲಕ್ಷ ರೂ.) ಪರಿಹಾರ ಘೋಷಿಸಿದ್ದಾರೆ.
ಸಂತ್ರಸ್ತರ ಮನೆಗೆ ಭೇಟಿ ನೀಡಿದ ಮುಖ್ಯಮಂತ್ರಿ, ಮೃತ ಕುಮಾರಸ್ವಾಮಿ ಅವರ ಪೋಷಕರಾದ ತಿಮ್ಮಯ್ಯ ಮತ್ತು ಶಾರದಮ್ಮ ಹಾಗೂ ಪತ್ನಿ ಮಂಜುಳಾ ಅವರ ಪೋಷಕರಾದ ರತ್ನಮ್ಮ ಮತ್ತು ಭದ್ರಪ್ಪ ಅವರಿಗೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಸಿದ್ದರಾಮಯ್ಯ, ಇದು ದುರದೃಷ್ಟಕರ. ಘಟನೆ ಸಂಭವಿಸಿದಾಗ ದಂಪತಿ ಕೊಠಡಿಯಲ್ಲಿ ಮತ್ತು ಅವರ ಹೆಣ್ಣುಮಕ್ಕಳು ಹಾಲ್‌ನಲ್ಲಿ ಮಲಗಿದ್ದರು. ಅದೊಂದು ಚಿಕ್ಕ ಮನೆ. ಅವರ ಪುತ್ರಿಯರಾದ ಅರ್ಚನಾ ಮತ್ತು ಸ್ವಾತಿ ಓದುತ್ತಿದ್ದರು. ಕುಮಾರಸ್ವಾಮಿ ಅವರು ಲಾಂಡ್ರಿ ಅಂಗಡಿ ಹೊಂದಿದ್ದರು. ಅವರ ತಂದೆ-ತಾಯಿ ಮತ್ತು ಸಂಬಂಧಿಕರಿಗೆ ಸಾಂತ್ವನ ಹೇಳಿದ್ದೇನೆ ಎಂದರು.
ಬುಧವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಜರ್‌ಬಾದ್ ಪೊಲೀಸರು ಮೃತದೇಹಗಳನ್ನು ಬುಧವಾರ ರಾತ್ರಿ ಅಂತ್ಯಕ್ರಿಯೆಗಾಗಿ ಸಂಬಂಧಿಕರಿಗೆ ಹಸ್ತಾಂತರಿಸಿದರು. ಗುರುವಾರ ಬೆಳಗ್ಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅವರ ಹುಟ್ಟೂರು ಸಖರಾಯಪಟ್ಟಣ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
FSL ತಂಡದ ದೃಢೀಕರಣ
ಮನೆ ಚಿಕ್ಕದಾಗಿರುವುದರಿಂದ (10x20 ಅಡಿ), ಸಾಕಷ್ಟು ಗಾಳಿಯಾಡುತ್ತಿರಲಿಲ್ಲ ಮತ್ತು ಎರಡು ಕಿಟಕಿಗಳು ಮುಚ್ಚಿದ್ದ ಕಾರಣ ಮನೆಯಲ್ಲಿದ್ದ ಮೂರು ಸಿಲಿಂಡರ್‌ಗಳ ಪೈಕಿ ಒಂದರಿಂದ ಎಲ್‌ಪಿಜಿ ಸೋರಿಕೆಯಾಗಿ, ಸಾವು ಸಂಭವಿಸಿದೆ ಎಂದು ಎಫ್‌ಎಸ್‌ಎಲ್ ತಂಡ ದೃಢಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.