ಬೆಂಗಳೂರು: ಕುಡಿತದ ಚಟಕ್ಕೆ ಹಣ ನೀಡದ್ದಕ್ಕೆ ಕೋಪಗೊಂಡ ಪತಿಯೊಬ್ಬ, ಪತ್ನಿಯ ಕೊಂದು ಕಾಲಿಗೆ ಹಗ್ಗ ಕಟ್ಟಿ ಮೃತದೇಹವನ್ನು 300 ಮೀಟರ್ ಎಳೆದೊಯ್ದಿರುವ ಘಟನೆಯೊಂದು ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಚನ್ನಪಟ್ಟಣದ ಕಸಬಾ ನಿವಾಸಿಯಾಗಿರುವ ಸಿ ಅಶ್ವಿನಿ (27) ಮೃತ ದುರ್ದೈವಿ. ಆರೋಪಿಯನ್ನು ರಮೇಶ್ ಎಂದು ಗುರ್ತಿಸಲಾಗಿದೆ.
ಅಶ್ವಿನಿ ವೈದ್ಯರೊಬ್ಬ ಮನೆಯಲ್ಲಿ ಅಡುಗೆ ಕೆಲಸದಾಕೆಯಾಗಿ ಕೆಲಸ ಮಾಡುತ್ತಿದ್ದರು. ಗಳಿಕೆಯ ಹಣವನ್ನು ರಮೇಶ್ ಕೇಳಿದ್ದು, ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.
ಬುಧವಾರ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ಗುರುವಾರ ಘಟನೆ ಬೆಳಕಿಗೆ ಬಂದಿದೆ. ರಾಮನಗರದ ವಿರುಪಾಕ್ಷಿಪುರ ಹೋಬಳಿಯ ಮನಗಡಹಳ್ಳಿ ಗ್ರಾಮದಲ್ಲಿ ಅಶ್ವಿನಿ ಶವ ಪತ್ತೆಯಾಗಿದೆ.
ರಮೇಶ್ ಕುಡಿದು ಬಂದು ಪತ್ನಿಗೆ ಥಳಿಸುತ್ತಿದ್ದ. ಕಿರುಕುಳ ತಾಳಲಾರದೆ ಅಶ್ವಿನಿ ತನ್ನ ಇಬ್ಬರು ಮಕ್ಕಳೊಂದಿಗೆ ಪೋಷಕರ ಮನೆಗೆ ತೆರಳಿದ್ದಳು. ನಂತರ ಆರೋಪಿ ಅತ್ತೆಯ ಮನೆಗೆ ಹೋಗಿ ಮತ್ತೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಮನವೊಲಿಸಿ ಮನೆಗೆ ಕರೆತಂದಿದ್ದಾನೆ. ಆದರೆ, ಮತ್ತೆ ಪತ್ನಿಗೆ ಕಿರುಕುಳ ನೀಡಿ, ಹತ್ಯೆ ಮಾಡಿದ್ದಾನೆ.
ಗುರುವಾರ ಅಶ್ವಿನಿಯವರ ತಾಯಿ ಮಂಜಮ್ಮ ಅವರಿಗೆ ಸಂಬಂಧಿಕರು ಕೊಲೆಯ ಬಗ್ಗೆ ಮಾಹಿತಿ ನೀಡಿದ್ದು, ಕೂಡಲೇ ಮಂಜಮ್ಮ ಅವರು ಮಗನೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ. ಸ್ಥಳದಲ್ಲಿ ಮಗಳ ಕಾಲಿಗೆ ಹಗ್ಗವನ್ನು ಕಟ್ಟಿರುವುದು ಕಂಡು ಬಂದಿದೆ. ಬಳಿಕ ರಮೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.
ಅಶ್ವಿನಿಯವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ನಂತರ ಕಾಲಿಗೆ ಹಗ್ಗ ಕಟ್ಟಿ ಎಳೆದೊಯ್ದಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.