ವಿಜಯಪುರ: ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಯಸಿಯನ್ನು ದೂರ ಮಾಡಿಕೊಳ್ಳಲು ಇಚ್ಛಿಸದ ಯುವಕನೋರ್ವ ನಿನ್ನೆ ಯುವತಿಯ ಮನೆ ಬಳಿ ಹೋಗಿದ್ದಾಗ ಯುವತಿಯ ಪೋಷಕರು ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮುದ್ದೇಬಿಹಾಳ ಪಟ್ಟಣದಲ್ಲಿ ನಿನ್ನೆ ಘಟನೆ ನಡೆದಿದೆ. ರಾಹುಲ್ ಬಿರಾದರ್ ಗೆ ಗಂಭೀರ ಸುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ರಾಹುಲ್ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಈ ಮಧ್ಯೆ ಯುವತಿ ಐಶ್ವರ್ಯ ಮದರಿ ತಂದೆ ಅಪ್ಪು ಮದರಿ, ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಮನೆಗೆಲಸದವನಿಗೂ ಸುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಐದಾರು ವರ್ಷಗಳಿಂದ ರಾಹುಲ್ ಹಾಗೂ ಐಶ್ವರ್ಯ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ಎರಡೂ ಮನೆಯವರೂ ಒಂದು ವರ್ಷದ ಹಿಂದೆಯೇ ರಾಜಿ ಪಂಚಾಯ್ತಿ ಮಾಡಿ ಇಬ್ಬರನ್ನು ದೂರ ಮಾಡಿದ್ದರು. ಇದರಿಂದ ರಾಹುಲ್ ಆಕ್ರೋಶಕೊಂಡಿದ್ದ. ಅಲ್ಲದೆ ಯುವತಿ ಮನೆ ಬಳಿ ಹೆಚ್ಚಾಗಿ ಓಡುಡುತ್ತಿದ್ದನು. ಈ ವಿಚಾರವಾಗಿ ಐಶ್ವರ್ಯ ಮನೆಯವರು ಕರೆ ಮಾಡಿ ರಾಹುಲ್ ನನ್ನು ಪ್ರಶ್ನಿಸಿದ್ದರು.
ಈ ವೇಳೆ ಯುವಕ ನಾನು ನಿಮ್ಮ ಮನೆಗೆ ಬರುವುದಾಗಿ ಹೇಳಿದ್ದನು. ಅದರಂತೆ ಮನೆಗೆ ಬಂದ ರಾಹುಲ್ ಮೇಲೆ ಅಪ್ಪು ಮದರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಪ್ರಕರಣ ಸಂಬಂಧ ಎರಡೂ ಮನೆಯವರು ಪ್ರತ್ಯೇಕ ದೂರು ನೀಡಿದ್ದಾರೆ. ಯುವಕನೇ ಪೆಟ್ರೋಲ್ ತಂದು ತಮ್ಮ ಮಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದ ಈ ವೇಳೆ ತಡೆಯಲು ಮುಂದಾದಾಗ ನಮಗೆ ಬೆಂಕಿ ತಗುಲಿದೆ ಎಂದು ದೂರಿದ್ದರೆ ಅತ್ತ ರಾಹುಲ್ ತಂದೆ ನಮ್ಮ ಮಗನನ್ನು ಮನೆಗೆ ಕರೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ದೂರು ನೀಡಿದ್ದಾರೆ.
ಸದ್ಯ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.