ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಇಂದು ವಿದೇಶದಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದು, ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಬಂಧಿಸಲು ಎಸ್ ಐಟಿ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಜರ್ಮನಿಯ ಮ್ಯೂನಿಚ್ ನಿಂದ ಲುಫ್ತಾನಾ ಏರ್ ಲೈನ್ಸ್ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಆಗಮಿಸುತ್ತಿದ್ದು, ರಾತ್ರಿ 12-30ರ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಜ್ವಲ್ ವಿರುದ್ಧ ವಾರೆಂಟ್ ಜಾರಿಯಾಗಿರುವುದರಿಂದ ಅವರನ್ನು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿ ಎಸ್ ಐಟಿ ಹೇಳಿಕೆ ಪಡೆಯಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಈ ಮಧ್ಯೆ ಪ್ರಜ್ವಲ್ ರೇವಣ್ಣ ಅವರಿಂದ ಅನ್ಯಾಯಕ್ಕೊಳಗಾದ ಸಂತ್ರಸ್ತೆಯರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜನಪರ ಚಳವಳಿಗಳ ಒಕ್ಕೂಟ ಹಾಸನದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು. ರಾಜ್ಯದ ಹಲವೆಡೆಗಳಿಂದ 113 ಸಂಘಟನೆಗಳ ಸುಮಾರು 10 ಸಾವಿರ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮ ನಿಯಮಿತದ ಸುಮಾರು 94.73 ಕೋಟಿ ರೂಪಾಯಿಯನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಆರೋಪದ ಮೇಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಆರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ನಿಗಮದ ಅಧಿಕಾರಿ ಚಂದ್ರಶೇಖರನ್ ಭಾನುವಾರ ಆತ್ಮಹತ್ಯೆ ಮಾಡಿಕೊಂಡ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅವರು ಡೆತ್ ನೋಟ್ ನಲ್ಲಿ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ್, ಅಕೌಂಟ್ಸ್ ಅಧಿಕಾರಿ ಪರಶುರಾಮ್ ಜಿ ದುರುಗಣ್ಣನವರ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ವ್ಯವಸ್ಥಾಪಕಿ ಸುಚಿಸ್ಮಿತಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಮಧ್ಯೆ, ಅಧಿಕಾರಿ ಮನೆಗೆ ಇಂದು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರಕರಣ ಸಂಬಂಧ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಜೂನ್ 6 ರೊಳಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ‘ಲಿಕ್ವಿಡ್ ನೈಟ್ರೋಜನ್’ ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸ್ಮೋಕಿಂಗ್ ಬಿಸ್ಕತ್ ಅಥವಾ ಡೆಸರ್ಟ್ಸ್ ಹಾಗೂ ಇತರೆ ತಿನಿಸುಗಳನ್ನು ಸೇವನೆಗಾಗಿ ಗ್ರಾಹಕರಿಗೆ ಒದಗಿಸುವ ಸಂದರ್ಭದಲ್ಲಿ ಲಿಕ್ವಿಡ್ ನೈಟ್ರೋಜನ್ ಬಳಸುವುದನ್ನು ನಿರ್ಬಂಧಿಸಲಾಗಿದೆ. ಆದೇಶವನ್ನು ಉಲ್ಲಂಘಿಸಿದಲ್ಲಿ ಆಹಾರ ತಯಾರಕರ ವಿರುದ್ಧ 7 ವರ್ಷ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುವುದು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದು 12 ವರ್ಷದ ಬಾಲಕಿಯ ಹೊಟ್ಟೆಯಲ್ಲಿ ರಂಧ್ರವಾಗಿತ್ತು. ಇದು ಜನರಲ್ಲಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ ಲಿಕ್ವಿಡ್ ನೈಟ್ರೋಜನ್ ಪಾನ್ ನಿಷೇಧಕ್ಕೆ ಒತ್ತಾಯಿಸಲಾಗಿತ್ತು.
ತಮ್ಮನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಬಳಿ ಪ್ರಾಣಿಗಳ ಬಲಿಯನ್ನು ಒಳಗೊಂಡ “ಶತ್ರು ಭೈರವಿ ಯಾಗ” ಎಂಬ ಆಚರಣೆ ನಡೆಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಹೇಳಿದ್ದಾರೆ. ಯಾರದೇ ಹೆಸರನ್ನು ಬಹಿರಂಗಪಡಿಸದ ಅವರು, ಕರ್ನಾಟಕದ ಕೆಲವು ರಾಜಕೀಯ ಜನರು ಇದನ್ನು ಮಾಡುತ್ತಿದ್ದಾರೆ ಮತ್ತು ಇದಕ್ಕಾಗಿ ಅಘೋರಿಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. "ನಡೆಯುತ್ತಿರುವ ಪೂಜೆಯ ಬಗ್ಗೆ, ಯಾರೋ ನನಗೆ ಲಿಖಿತವಾಗಿ ವಿವರಗಳನ್ನು ಕೊಟ್ಟಿದ್ದಾರೆ, ಅದು ಎಲ್ಲಿ ಮಾಡಲಾಗುತ್ತಿದೆ ಮತ್ತು ಯಾರು ಮಾಡುತ್ತಿದ್ದಾರೆ ಎಂದು ನನಗೆ ಬರೆದಿದ್ದಾರೆ’’. ಈ ಯಾಗಕ್ಕೆ ‘ಪಂಚ ಬಲಿ’ ನೀಡಲಾಗುತ್ತಿದೆ... ಎಂದು ಶಿವಕುಮಾರ್ ಹೇಳಿದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾದ ಆದಿಲ್ ಎಂಬಾತನ ಮರಣೋತ್ತರ ಪರೀಕ್ಷೆಯ ವರದಿಯನ್ನು ಸಿಐಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಲೋ ಬಿಪಿ, ಹೃದಯ ಸ್ತಂಭನದಿಂದಾಗಿ ಆದಿಲ್ ಸಾವಿಗೀಡಾಗಿರಬಹುದು ಎಂದು ಮೂಲಗಳು ಬಹಿರಂಗಪಡಿಸಿವೆ. ಮಟ್ಕಾ ಜೂಜಾಟ ನಡೆಸುತ್ತಿದ್ದ ಆರೋಪದಡಿ ಆದಿಲ್ ಎಂಬಾತನನ್ನು ಮೇ 24ರಂದು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ನಂತರ ಆತನ ಆರೋಗ್ಯ ಸ್ಥಿತಿ ಹದಗೆಟ್ಟಿತು ಮತ್ತು ಆತ ಠಾಣೆಯಲ್ಲಿಯೇ ಮೃತಪಟ್ಟಿದ್ದನು.