ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಇಂದು ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರಿಗೂ ಬಂಧನದ ಭೀತಿ ಎದುರಾಗಿದೆ. ಮೈಸೂರಿನ ಕೆಆರ್ ಪೇಟೆಯಲ್ಲಿ ದಾಖಲಾಗಿರುವ ಕಿಡ್ನ್ಯಾಪ್ ಕೇಸ್ನಲ್ಲಿ ಬಂಧನದ ಭೀತಿ ಎದುರಾದ ಹಿನ್ನೆಲೆಯಲ್ಲಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಇಂದಿಗೆ ಜಾಮೀನು ಆದೇಶ ಕಾಯ್ದಿರಿಸಿತ್ತು. ಇದೀಗ ಕೋರ್ಟ್, ಭವಾನಿ ರೇವಣ್ಣ ಅವರಿಗೆ ಜಾಮೀನು ತಿರಸ್ಕರಿಸಿದೆ. ಮತ್ತೊಂದೆಡೆ ಪುತ್ರ ಪ್ರಜ್ವಲ್ ರೇವಣ್ಣನನ್ನು ಕೋರ್ಟ್ ಆರು ದಿನ ಎಸ್ಐಟಿ ಕಸ್ಟಡಿಗೆ ನೀಡಿ ವಿಚಾರಣೆಯನ್ನು ಜೂ.7ಕ್ಕೆ ಮುಂದೂಡಿದೆ.
ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಭವಾನಿ ರೇವಣ್ಣಗೆ ಎಸ್ಐಟಿ ನೊಟೀಸ್ ನೀಡಿತ್ತು. ಆದರೆ ನೊಟೀಸ್ಗೆ ಭವಾನಿ ರೇವಣ್ಣ ಉತ್ತರ ನೀಡಿಲ್ಲ. ಕಳೆದ ಹದಿನೈದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಮೇ 4 ರಂದು ಸಂತ್ರಸ್ತೆಯರ ಸ್ಥಳ ಮಹಜರಿನ ವೇಳೆ ಹೊಳೆನರಸೀಪುರ ಮನೆಯಲ್ಲಿ ಭವಾನಿ ಹಾಜರಿದ್ದರು. ಆ ನಂತರ ಮೇ 6 ರಂದು ಹೊಳೆನರಸೀಪುರದ ಮನೆಯಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ಭವಾನಿಯನ್ನು ಬೇಟಿಯಾಗಿದ್ದರು. ಶಾಸಕರನ್ನು ಭೇಟಿಯಾದ ನಂತರ ಹೊಳೆನರಸೀಪುರ ಮನೆಯಿಂದ ಹೋದವರು ಇದುವರೆಗೆ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.