ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ವರದಿಯಾಗಿದೆ. ಇಬ್ಬರು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಕಾರೊಂದನ್ನು ಹಿಂಬಾಲಿಸಿ, ಅಡ್ಡಗಟ್ಟಿ ಕಾರಿನ ಗಾಜಿಗೆ ಕಲ್ಲು ಹೊಡೆದು ಪುಂಡಾಟ ನಡೆಸಿದ್ದು, ಘಟನೆಯಲ್ಲಿ 5 ವರ್ಷದ ಬಾಲಕನಿಗೆ ಗಾಯವಾಗಿರುವ ಘಟನೆ ಪರಪ್ಪನ ಅಗ್ರಹ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅನೂಪ್ ಜಾರ್ಜ್ ಮತ್ತು ಅವರ ಪತ್ನಿ ಜಿಸ್ ಜೇಕಬ್ ಇಬ್ಬರೂ ಟೆಕ್ಕಿಗಳಾಗಿದ್ದು, ತಮ್ಮ ಮಗ ಮತ್ತು 11 ವರ್ಷದ ಮಗಳೊಂದಿಗೆ ದೀಪಾವಳಿ ಶಾಪಿಂಗ್ ಮುಗಿಸಿ ಕಾರಿನಲ್ಲಿ ಮನೆಗೆ ಮರಳುತ್ತಿದ್ದಾಗ ಪರಪ್ಪನ ಅಗ್ರಹಾರ ಪೊಲೀಸ್ ವ್ಯಾಪ್ತಿಯ ಚೂಡಸಂದ್ರದಲ್ಲಿ ಬುಧವಾರ ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಕಾರನ್ನು ಹಿಂಬಾಲಿಸಿರುವ ದುಷ್ಕರ್ಮಿಗಳು ಅನೂಪ್ ಅವರ ಬಳಿ ಬಂದು ಕಾರಿನ ಕಿಟಕಿಯ ಗಾಜನ್ನು ಕೆಳಗಿಳಿಸುವಂತೆ ತಿಳಿಸಿದ್ದಾರೆ. ಈ ವೇಳೆ ಭಯಭೀತರಾದ ಅನೂಪ್ ಅವರು ಕಾರನ್ನು ನಿಲ್ಲಿಸದೆ ಮುಂದೆ ಸಾಗಿದ್ದಾರೆ.
ಈ ವೇಳೆ ದುಷ್ಕರ್ಮಿಗಳು ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ. ಪರಿಣಾಮ ಐದು ವರ್ಷದ ಮಗುವಿಗೆ ಕಲ್ಲು ತಾಗಿ ತಲೆಗೆ ಗಂಭೀರ ಗಾಯವಾಗಿದೆ. ಘಟನೆ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ನಡುವೆ ದಂಪತಿಗಳು ಮಗುವನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ತೀವ್ರ ರಕ್ತಸ್ರಾವವಾಗಿದ್ದು, ಮೂರು ಸ್ಟಿಚ್ ಹಾಕಲಾಗಿದೆ.
ಈ ನಡುವೆ ಘಟನೆಯನ್ನು ಅನೂಪ್ ಅವರ ಪತ್ನಿ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕಾರ್ಯಾಚರಣೆಗಿಳಿದ ನಗರದ ಪೊಲೀಸರು ಕೃಷ್ಣಮೂರ್ತಿ ಎಂಬಾತನನ್ನು ಬಂದನಕ್ಕೊಳಪಡಿಸಿದ್ದಾರೆ.
ಆದರೆ, ಘಟನೆಗೂ ಕೃಷ್ಣಮೂರ್ತಿಯವರಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗುತ್ತಿದೆ. ಬುಧವಾರ ರಾತ್ರಿ ಕೃಷ್ಣಮೂರ್ತಿಯವರು ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದಾಗ ವ್ಯಕ್ತಿಯೊಬ್ಬರು ಲಿಫ್ಟ್ ಗಾಗಿ ಎದುರು ನೋಡುತ್ತಿರುವುದು ಕಂಡು ಬಂದಿದೆ. ಈ ವೇಳೆ ವ್ಯಕ್ತಿ ಟೆಕ್ಕಿ ತನ್ನ ಕಾಲಿಗೆ ಹಾನಿ ಮಾಡಿ, ವೇಗವಾಗಿ ಹೋಗುತ್ತಿದ್ದಾನೆಂದು ಹೇಳಿದ್ದಾನೆ. ಬಳಿಕ ಕೃಷ್ಣ ಮೂರ್ತಿಯವರು ವ್ಯಕ್ತಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಅನೂಪ್ ಅವರ ಕಾರನ್ನು ಹಿಂಬಾಲಿಸಿದ್ದಾರೆಂದು ತಿಳಿದುಬಂದಿದೆ. ಈ ನಡುವೆ ಕಲ್ಲೆಸೆದ ಆರೋಪಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.