ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ದಕ್ಷಿಣ ವಲಯದ ಬೇಗೂರು ವಾರ್ಡ್‌ನಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳು, ಮಹಿಳೆಯರು ಹಾಗೂ ಮಕ್ಕಳ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿರುವುದಾಗಿ ನಾಗರೀಕರು ದೂರಿದ್ದಾರೆ.
ಸ್ಥಳದಲ್ಲಿ ಮಂಗಗಳ ಕಾಟ ಹೆಚ್ಚಾಗಿದೆ ಎಂದು ಎಸ್‌ಎನ್‌ಎನ್ ರಾಜ್ ಸೆರಿನಿಟಿ ಅಪಾರ್ಟ್‌ಮೆಂಟ್‌ನ ನಿವಾಸಿಗಳು ದೂರಿದ್ದಾರೆ. ಈ ಹಿಂದೆ 1-2 ಮಂಗಳು ಆಗಾಗ್ಗೆ ಬರುತ್ತಿದ್ದವು. ಆದರೆ, ಕಳೆದ ಎರಡು ತಿಂಗಳಲ್ಲಿ 10 ಕ್ಕೂ ಹೆಚ್ಚು ಮಂಗಗಳ ಗುಂಪುಗಳೊಂದಿಗೆ ಬರುತ್ತಿದ್ದು, ಸ್ಥಳದಲ್ಲಿ ಬೀಡುಬಿಟ್ಟಿದೆ, ಮಹಿಳೆಯರು ಹಾಗೂ ಮಕ್ಕಳ ಮೇಲೆ ದಾಳಿ ಮಾಡುತ್ತಿದ್ದು, ಆತಂಕವನ್ನುಂಟು ಮಾಡಿದೆ.
ಕೆಲ ದಿನಗಳ ಹಿಂದಷ್ಟೇ ಮಂಗವೊಂದು ನನ್ನ ಸ್ಮಾರ್ಟ್‌ಫೋನ್'ನ್ನು ಕಸಿದುಕೊಂಡಿತ್ತು. ಮತ್ತೊಂದು ಫ್ಲಾಟ್‌ನಲ್ಲಿ, ಕೋತಿಯೊಂದು ಯುಟಿಲಿಟಿ ಪ್ರದೇಶಕ್ಕೆ ಪ್ರವೇಶಿಸಿ ಪ್ಲೇಟ್‌ಗಳನ್ನು ತೆಗೆದುಕೊಂಡು ಹೋಗಿದೆ. ನಾಲ್ಕು ವರ್ಷದ ಮಗು ಮೇಲೆ ಕೂಡ ಕೋತಿಗಳು ಎರಡು ಬಾರಿ ದಾಳಿ ಮಾಡಿದೆ, ಇದೀಗ ಮಗು ಗಾಬರಿಗೊಂಡಿದೆ. ಬಿಬಿಎಂಪಿಯ ಅರಣ್ಯ ವಿಭಾಗಕ್ಕೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೆ, ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಸ್ಥಳೀಯ ನಿವಾಸಿ ವಿನೀತ್ ಮೊಡನ್ ಎಂಬುವವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) ಬಿಎಲ್‌ಜಿ ಸ್ವಾಮಿ ಅವರು, ಬೇಗೂರಿನಲ್ಲಿ ಮಂಗಗಳ ಕಾಟ ಹೆಚ್ಚಾಗಿರುವುದು ನಿಜ. ಸುಮಾರು 15 ಮಂಗಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ಶೀಘ್ರದಲ್ಲೇ ಅರಣ್ಯ ಇಲಾಖೆ ಕೋತಿಗಳ ಸೆರೆ ಹಿಡಿಯಲಿದೆ ಎಂದು ಹೇಳಿದ್ದಾರೆ.
1971 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಶೆಡ್ಯೂಲ್ 2 ರ ಅಡಿಯಲ್ಲಿ ಪ್ರಾಣಿ ಬರುವುದರಿಂದ, ಯಾವುದೇ ಕ್ರಮ ಕೈಗೊಳ್ಳುವ ಮೊದಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅನುಮತಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಪಂಜರಗಳ ಬಳಸಿ ಮಂಗಗಳನ್ನು ಸೆರೆ ಹಿಡಿಯಲಾಗುವುದು. ಮೊದಲಿಗೆ ಎರಡು ಕೋತಿಗಳನ್ನು ಸೆರೆಹಿಡಿದರೆ ನಂತರ ಉಳಿದ ಕೋತಿಗಳೂ ಸುಲಭವಾಗಿ ಸೆರೆಹಿಡಿಯಬಹುದು. ಸೆರೆ ಹಿಡಿದ ಈ ಮಂಗಗಳನ್ನು ಬನ್ನೇರುಘಟ್ಟ ಪ್ರಾಣಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಕೊಂಡೊಯ್ಯಲಾಗುವುದು. ಸೆರೆ ಹಿಡಿದ ಮಂಗಗಳನ್ನೂ ಕೂಡಲೇ ಬಿಡುಗಡೆ ಮಾಡಿದರೆ, ಮತ್ತೆ ಬೇಗೂರಿಗೆ ಹಿಂತಿರುಗುವ ಸಾಧ್ಯತೆಗಳಿವೆ. ಹೀಗಾಗಿ ಪುನರ್ವಸತಿ ಕೇಂದ್ರದಲ್ಲಿ ಸ್ವಲ್ಪ ಸಮಯದವರೆಗೂ ಇರಿಸಿಸ, ನಂತರ ಬಿಡುಗಡೆ ಮಾಡಲಾಗುವುದು ಎಂದರು.