ಬೆಂಗಳೂರು: ತಮ್ಮ ಪತ್ನಿಗೆ ಅನುಕೂಲ ಮಾಡಿಕೊಡಲು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿದ್ದಾರೆ, ಹೀಗಾಗಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಜಾರಿ ನಿರ್ದೇಶನಾಲಯಕ್ಕೆ ದೂರು ದಾಖಲಿಸಿದ್ದಾರೆ.
ಸ್ನೇಹಮಯಿ ಕೃಷ್ಣ ನೀಡಿರುವ 16 ಪುಟಗಳ ದೂರಿನ ಪ್ರತಿಯು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಲಭ್ಯವಾಗಿದೆ, ಸಿಎಂ ಸಿದ್ದರಾಮಯ್ಯ ಅವರ ಕುಟುಂಬವು 55.8 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ತೋರಿಸುತ್ತದೆ. ಸಿದ್ದರಾಮಯ್ಯ ಮತ್ತು ಅವರ ಕುಟುಂಬಸ್ಥರಿಂದ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಆರೋಪಿಸಿರುವ ಕೃಷ್ಣ, ಅಧಿಕಾರಿಗಳು ತಮ್ಮ ದೂರಿನ ಬಗ್ಗೆ ಗಮನಹರಿಸಿ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಕೃಷ್ಣ, ಈ ಹಿಂದೆ ಇಮೇಲ್‌ನಲ್ಲಿ ದೂರು ಕಳುಹಿಸಿದ್ದೆ ಮತ್ತು ಈಗ ಔಪಚಾರಿಕವಾಗಿ ದೂರು ದಾಖಲಿಸಿದ್ದೇನೆ ಅದನ್ನು ಇಡಿ ಒಪ್ಪಿಕೊಂಡಿದೆ ಎಂದಿದ್ದಾರೆ. "2015 ರಿಂದ ಮುಡಾದ ಸೈಟ್ ಹಂಚಿಕೆ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಬೆಳಕಿಗೆ ತರುವುದು ನನ್ನ ಉದ್ದೇಶವಾಗಿದೆ, ಅಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ನಿರಾಕರಿಸಲಾಗಿದೆ ಮತ್ತು ಈ ವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ. ಸಿಎಂ ಇತರ ವ್ಯಕ್ತಿಗಳೊಂದಿಗೆ ಸೇರಿ ಕ್ರಿಮಿನಲ್ ಸಂಚು ರೂಪಿಸಿ ಸಾರ್ವಜನಿಕ ದಾಖಲೆಗಳನ್ನು ಬದಲಿಸಿದ್ದಾರೆ, ಸುಳ್ಳು ದಾಖಲೆ ಸೃಷ್ಟಿಸಿ, ಮುಡಾ ಭೂಮಿಯನ್ನು ಕಬಳಿಸಲು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಅಸಲಿ ದಾಖಲೆಗಳನ್ನು ಬಳಸಿಕೊಂಡಿದ್ದಾರೆ ಎಂದು ಕೃಷ್ಣ ದೂರಿನಲ್ಲಿ ಆರೋಪಿಸಿದ್ದಾರೆ.