ಬೆಂಗಳೂರು: ಗಂಡ ಹೆಂಡತಿ ಜಗಳವನ್ನೇ ಇಡೀ ದಿನ ತೋರಿಸಿದರೆ ಅದು ನೈತಿಕ ಪತ್ರಿಕೋದ್ಯಮವಾ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಪ್ರಶ್ನಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವಾರ್ತಾ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ಹಾಗೂ ಟಿಯೆಸ್ಸಾರ್ ಮತ್ತು ಮೊಹರೆ ಹಣಮಂತರಾಯ ಪತಿಕ್ರೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಖ್ಯಮಂತ್ರಿ, ಈಗ ಸುಳ್ಳು ಸುದ್ದಿ ಹಾಗೂ ಊಹಾ ಪತ್ರಿಕೋದ್ಯಮದ ಪಿಡುಗು ಹೆಚ್ಚಾಗಿದೆ. ಈ ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಬೇಕಾಗಿದೆಯಾ? ಎಂದು ಪ್ರಶ್ನಿಸಿದರು. ಸುಳ್ಳು ಸುದ್ದಿಗಳಿಂದ ಸಮಾಜ ಸುಧಾರಣೆಯಾಗುವುದಿಲ್ಲ, ನಾವೆಲ್ಲರೂ ಸುಳ್ಳು ಸುದ್ದಿ ವಿರುದ್ಧ ನಿಲ್ಲಬೇಕು ಎಂದು ಕರೆ ನೀಡಿದರು.
ಅವರು ಹಿಂಗೆ ಹೇಳಿದ್ರು, ನೀವೇನು ಹೇಳ್ತೀರಾ? ಅಂತ ಮುಖಕ್ಕೆ ಮೈಕ್ ಹಿಡಿಯೋದೇ ಇವತ್ತಿನ ಪತ್ರಿಕೋದ್ಯಮ ಆಗಿಬಿಟ್ಟಿದೆ. ಇದು ಯಾವ ರೀತಿ ಪತ್ರಿಕೋದ್ಯಮ ನನಗಂತೂ ಅರ್ಥವಾಗುತ್ತಿಲ್ಲ. ಹಿಂದೆಲ್ಲಾ ಪತ್ರಕರ್ತರಿಗೆ ತುಂಬಾ ಘನತೆ ಗೌರವ ಇತ್ತು. ಈಗ ಇದೆಯಾ ಗೊತ್ತಿಲ್ಲ. ಈ ಬಗ್ಗೆ ವಿಶ್ಲೇಷಣೆ ಮಾಡಿದರೆ ಅದನ್ನೇ ದೊಡ್ಡ ವಿವಾದ ಮಾಡಿಬಿಡ್ತಾರೆ. ಹೀಗಾಗಿ ಈ ಊಹಾ ಪತ್ರಿಕೋದ್ಯಮದ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ಈಗಿನ ಪತ್ರಕರ್ತರಿಗೆ ಪತಿಕ್ರೋದ್ಯಮ ಪ್ರಶಸ್ತಿ ಪುರಸ್ಕೃತರು ಮಾದರಿ ಆಗಬೇಕು ಎಂದರು.
ನಾನು ಮೊದಲ ಬಾರಿ ಮುಖ್ಯಮಂತ್ರಿ ಆದ ಬಳಿಕ 2014 ರಲ್ಲಿ ಮಹಾತ್ಮಗಾಂಧಿ ಸೇವಾ ಪ್ರಶಸ್ತಿಯನ್ನು ಆರಂಭಿಸಿದೆ. ಗಾಂಧಿ ತತ್ವಗಳನ್ನು ಅನುಸರಿಸುತ್ತಾ, ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ ಕಲಿಸುತ್ತಿರುವ ಅತ್ಯಂತ ಅರ್ಹರು ಈ ಬಾರಿಯ ಗಾಂಧಿ ಸೇವಾ ಪ್ರಶಸ್ತಿ ಪಡೆದಿದ್ದಾರೆ. ಪ್ರಶಸ್ತಿ ವಿತರಿಸಲು ಹೆಮ್ಮೆಯೆನಿಸುತ್ತಿದೆ. ಶಿಕ್ಷಣ ಪಡೆದವರೆಲ್ಲಾ ಮಾನವೀಯತೆ ಇರುವವರು ಎಂದು ಹೇಳಲಾಗುವುದಿಲ್ಲ. ಶಿಕ್ಷಣ ಮನುಷ್ಯರನ್ನು ಮಾನವೀಯಗೊಳಿಸಬೇಕು. ಇಲ್ಲದಿದ್ದರೆ ಅಂತಹ ಶಿಕ್ಷಣಕ್ಕೆ ಮೌಲ್ಯ ಇರುವುದಿಲ್ಲ ಎಂದು ಹೇಳಿದರು.
ಶಿಕ್ಷಣ ಪಡೆದವರು ಸಮಾಜದ ಆಸ್ತಿ ಆಗಬೇಕು. ಸಮಾಜದ ವಿರೋಧಿ ಆಗಬಾರದು. ಗಾಂಧೀಜಿ ಅವರ ಬದುಕೇ ಸಂದೇಶವಾಗಿತ್ತು. ಸಮಾಜದ ಬದಲಾವಣೆಗಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು. ಹೀಗಾಗಿ ಇವರ ವಿಚಾರಗಳು ಎಂದೆಂದಿಗೂ ಶಾಶ್ವತ ಎಂದು ಮುಖ್ಯಮಂತ್ರಿ ಹೇಳಿದರು.