ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಿಸುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್4 ರಿಂದ 7ರವರೆಗೆ ತನ್ನ ಆನ್ ಲೈನ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ಇಂಧನ ಇಲಾಖೆ ಬುಧವಾರ ತಿಳಿಸಿದೆ.
ಐಪಿಡಿಎಸ್ ಐಟಿ ಹಂತ-2 ಯೋಜನೆಯ ಭಾಗವಾಗಿ ಬೆಸ್ಕಾಂ ತನ್ನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣ ಕೈಗೊಳ್ಳಲಾಗುತ್ತಿದೆ. ಮಾರ್ಚ್ 20, 2024 ರಂದು ಮೊದಲ ಹಂತದ ಉನ್ನತೀಕರಣ ಮುಕ್ತಾಯಗೊಂಡಿತ್ತು ಎಂದು ಬೆಸ್ಕಾಂ ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣಗಳನ್ನು ಒಳಗೊಂಡಿರುವ ಕರ್ನಾಟಕದ ಎಲ್ಲ ಎಸ್ಕಾಂಗಳಿಗೆ ಐಟಿ ಯೋಜನೆಯ ಅನುಷ್ಠಾನಕ್ಕೆ ಬೆಸ್ಕಾಂ ನೋಡಲ್ ಏಜೆನ್ಸಿಯಾಗಿದೆ. ಹೊಸ ಆ್ಯಪ್ ಗಳು ದಕ್ಷತೆಯನ್ನು ಹೆಚ್ಚಿಸುತ್ತವೆ ಮತ್ತು ಕಾರ್ಯಾಚರಣೆಯ ನಂತರ ಬಳಕೆದಾರರ ಅನುಭವವನ್ನು ಸುಧಾರಿಸುತ್ತದೆ ಎಂದು ಭರವಸೆ ನೀಡುತ್ತವೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಹೇಳಿದ್ದಾರೆ.
ಆನ್ ಲೈನ್ ಸೇವೆ ಅಲಭ್ಯತೆಯ ಸಮಯದಲ್ಲಿ ಹೊಸ ಸಂಪರ್ಕಗಳ ಪ್ರಕ್ರಿಯೆ, ಹೆಸರು ಮತ್ತು ಸುಂಕ ಬದಲಾವಣೆಗಳು, ಹೆಸರು ವರ್ಗಾವಣೆ ಮತ್ತು ತಾತ್ಕಾಲಿಕ ಸಂಪರ್ಕಗಳಂತಹ ಕಾರ್ಯಾಚರಣೆಗಳಿಗೆ 'ಆರ್ ಎಪಿಡಿಆರ್ ಪಿ ಅಪ್ಲಿಕೇಶನ್ ಲಭ್ಯವಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಆನ್ ಲೈನ್ ಸೇವೆ ಇರದ ನಗರ, ಪಟ್ಟಣಗಳು: ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಸಿರಾ, ಚನ್ನಪಟ್ಟಣ, ಆನೇಕಲ್, ಮುಳಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್. ಹಿರಿಯೂರು, ತಿಪಟೂರು ಮತ್ತು ಗೌರಿಬಿದನೂರು.