ಬೆಂಗಳೂರು: ವೀರ ಸಾವರ್ಕರ್ ಗೋಮಾಂಸ ತಿನ್ನುತ್ತಿದ್ದರು ಎಂಬ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಸ್ವತಃ ಸಾವರ್ಕರ್ ಮೊಮ್ಮಗ ರಂಜಿತ್ ಸಾವರ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಸಚಿವ ದಿನೇಶ್ ಗುಂಡೂರಾವ್, ವೀರ್ ಸಾವರ್ಕರ್ ಅವರ ಸಿದ್ಧಾಂತದ ಕುರಿತು ಹೇಳಿಕೆ ನೀಡಿದ್ದರು. ಸಾವರ್ಕರ್ ಚಿತ್ಪಾವನ ಬ್ರಾಹ್ಮಣರಾಗಿದ್ದರೂ ಅವರು "ಗೋಮಾಂಸ ಸೇವಿಸುತ್ತಿದ್ದರು" ಎಂದು ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ವ್ಯಾಪಕ ಟೀಕೆ ಮತ್ತು ಚರ್ಚೆಗೆ ಗ್ರಾಸವಾಗಿದೆ.
ಮಾನನಷ್ಟ ಮೊಕದ್ದಮೆ ಹೂಡುತ್ತೇವೆ
ಇನ್ನು ದಿನೇಶ್ ಗುಂಡೂರಾವ್ ಅವರ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಅವರು, 'ಸಾವರ್ಕರ್ ಅವರ ಮಾನಹಾನಿ ಮಾಡುವುದು ಕಾಂಗ್ರೆಸ್ ತಂತ್ರವಾಗಿದೆ. ಅದರಲ್ಲೂ ವಿಶೇಷವಾಗಿ ಚುನಾವಣೆಗಳ ಹೊಸ್ತಿಲಲ್ಲಿ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಹಿಂದೂ ಸಮಾಜವನ್ನು ವಿವಿಧ ಜಾತಿಗಳಾಗಿ ವಿಭಜಿಸಲು ಬಯಸುತ್ತದೆ.
ಕಾಂಗ್ರೆಸ್ ಈಗ ತನ್ನ ನಿಜವಾದ ಮುಖವನ್ನು ತೋರಿಸುತ್ತಿದ್ದು, ಇದು ಬ್ರಿಟಿಷರ "ಒಡೆದು ಆಳುವ" ನೀತಿಯಾಗಿದೆ. ರಾಹುಲ್ ಗಾಂಧಿ ಇದನ್ನು ಮಾಡುತ್ತಿದ್ದರು ಮತ್ತು ಈಗ ಅವರ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಎಂದು ಅವರು ಹೇಳಿದರು.
ಅಂತೆಯೇ ವೀರ್ ಸಾವರ್ಕರ್ ಅವರು "ಗೋಮಾಂಸ ಸೇವಿಸುತ್ತಿದ್ದರು" ಎಂಬ ಹೇಳಿಕೆಗಳು ಸುಳ್ಳು ಎಂದು ರಂಜಿತ್ ಸಾವರ್ಕರ್ ಹೇಳಿದ್ದು, ಮಾತ್ರವಲ್ಲದೇ ಅವರ ಹೇಳಿಕೆಗಾಗಿ ಗುಂಡೂರಾವ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡುವುದಾಗಿ ಹೇಳಿದ್ದಾರೆ.
"ಸಾವರ್ಕರ್ ಅವರು ಗೋಮಾಂಸ ತಿನ್ನುತ್ತಾರೆ ಮತ್ತು ಗೋಹತ್ಯೆಯನ್ನು ಬೆಂಬಲಿಸುತ್ತಿದ್ದರು ಎಂಬ ಹೇಳಿಕೆ ಸುಳ್ಳು, ಮರಾಠಿಯಲ್ಲಿ ಅವರ ಮೂಲ ಲೇಖನದಲ್ಲಿ ಗೋವು ತುಂಬಾ ಉಪಯುಕ್ತವಾಗಿದ್ದು, ಆದ್ದರಿಂದ ಅವುಗಳನ್ನು ದೇವತೆಗಳೆಂದು ಪರಿಗಣಿಸಲಾಗಿದೆ ಎಂದು ಹೇಳಿದ್ದರು ಎಂಬ ಉಲ್ಲೇಖವಿದೆ. ಸಾವರ್ಕರ್ ಅವರು ಗೋರಕ್ಷಾ ಸಮ್ಮೇಳನದ ಅಧ್ಯಕ್ಷರೂ ಕೂಡ ಆಗಿದ್ದರು. ಹೀಗಾಗಿ ಕಾಂಗ್ರೆಸ್ ನಾಯಕರ ಹೇಳಿಕೆ ಶುದ್ಧ ಸುಳ್ಳು.. ... ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿಯೇ ಹೋಗುತ್ತೇನೆ ಎಂದು ರಂಜಿತ್ ಸಾವರ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾವರ್ಕರ್ ಬಗ್ಗೆ ಕಾಂಗ್ರೆಸ್ಸಿಗರಿಗೆ ಏನೂ ತಿಳಿದಿಲ್ಲ: ದೇವೇಂದ್ರ ಫಡ್ನವೀಸ್
ಇದೇ ವೇಳೆ ದಿನೇಶ್ ಗುಂಡೂರಾವ್ ಹೇಳಿಕೆ ಖಾರವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, 'ಕಾಂಗ್ರೆಸ್‌ನಲ್ಲಿರುವವರಿಗೆ ಸಾವರ್ಕರ್ ಬಗ್ಗೆ ಏನೂ ತಿಳಿದಿಲ್ಲ ಮತ್ತು ಉದ್ದೇಶಪೂರ್ವಕವಾಗಿ ಅವರನ್ನು ಅವಮಾನಿಸುತ್ತಾರೆ. ರಾಹುಲ್ ಗಾಂಧಿ ಅವರು ಸಾವರ್ಕರ್ ಅವರ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡುವ ಸರಣಿಯನ್ನು ಪ್ರಾರಂಭಿಸಿದರು ಮತ್ತು ಅವರ ನಾಯಕರು ಅದನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಕರ್ನಾಟಕ ಆರೋಗ್ಯ ಸಚಿವ ಗುಂಡೂರಾವ್ ರ ಹೇಳಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. '"ಇಂತಹ ಜ್ಞಾನ" ಜನರು ತಮ್ಮ "ಮಾನಸಿಕ ಸಮತೋಲನ" ಕಳೆದುಕೊಂಡಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ. ಉತ್ತಮ "ಮಾನಸಿಕ ಸಂಸ್ಥೆ" ಗೆ ಹೋಗಿ ಚಿಕಿತ್ಸೆ ಪಡೆದರೆ ಒಳಿತು. ಸಮಾಜವು ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಅವರು ಉತ್ತಮವಾಗಲು ಮತ್ತು ದೇಶದ ಮಹಾನ್ ವ್ಯಕ್ತಿಗಳ ಬಗ್ಗೆ ಜ್ಞಾನವನ್ನು ಪಡೆಯಲು ಮಾನಸಿಕ ಸಂಸ್ಥೆಗೆ ಹೋಗಬೇಕು ನಖ್ವಿ ಹೇಳಿದರು.
ಹಿಂದೂಗಳನ್ನ ಟೀಕೆ ಮಾಡೋದನ್ನ ಕಾಂಗ್ರೆಸ್ ಬ್ರ‍್ಯಾಂಡ್ ಮಾಡಿಕೊಂಡಿದೆ: ಆರ್ ಅಶೋಕ
ಕರ್ನಾಟಕ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ನಾಯಕ ಆರ್ ಅಶೋಕ ಕೂಡ ಈ ವಿಷಯದ ಬಗ್ಗೆ ಮಾತನಾಡಿದ್ದು, 'ಕಾಂಗ್ರೆಸ್‌ನವರಿಗೆ ಹಿಂದೂಗಳೇ ಟಾರ್ಗೆಟ್. ಹಿಂದೂಗಳನ್ನ ಟೀಕೆ ಮಾಡೋದನ್ನ ಕಾಂಗ್ರೆಸ್ ಬ್ರ‍್ಯಾಂಡ್ ಮಾಡಿಕೊಂಡಿದೆ. ಕಾಂಗ್ರೆಸ್ ಅವರಿಗೆ ಸಾವರ್ಕರ್ ವಿಲನ್ ಆಗಿದ್ದಾರೆ. ಅದಕ್ಕೆ ಹೀಗೆಲ್ಲ ಮಾತನಾಡುತ್ತಾರೆ. ಸಾವರ್ಕರ್ ಕಾಲಾಪಾನಿ ಶಿಕ್ಷೆ ಒಳಗಾಗಿದ್ದವರು, ಸ್ವಾತಂತ್ರ‍್ಯ ಹೋರಾಟಗಾರರು. ಈಗ ಅವರು ಸತ್ತು ಸ್ವರ್ಗದಲ್ಲಿ ಇದ್ದಾರೆ. ಯಾಕೆ ಅವರ ಬಗ್ಗೆ ಅಪಾದನೆ ಮಾಡುತ್ತಿದ್ದೀರಾ ಎಂದು ಕಿಡಿಕಾರಿದರು.
ಅಂತೆಯೇ ಕಾಂಗ್ರೆಸ್ ಅವರಿಗೆ ಕೇಸರಿ ಶಾಲು ಹಾಕಬಾರದು. ನಾಮ ಹಾಕಬಾರದು. ಕುಂಕುಮ ಇಡೋದು ಆಗಲ್ಲ. ಮುಂದೆ ಹೆಣ್ಣುಮಕ್ಕಳು ಬಳೆ, ಕುಂಕುಮ ಹಾಕೋದಕ್ಕೂ ವಿರೋಧ ಮಾಡುತ್ತಾರೆ. ಕಾಂಗ್ರೆಸ್ ಅವರು ಮೊದಲು ಹಿಂದೂಗಳನ್ನು ತೆಗಳೋದು ಬಿಡಬೇಕು. ಹಿಂದೂಗಳನ್ನ ಮಾತ್ರ ಯಾಕೆ ಟೀಕೆ ಮಾಡುತ್ತೀರಾ? ಮುಸ್ಲಿಮರಿಗೆ ಒಂದು ಮಾತು ಆಡಿದ್ದೀರಾ ನೀವು? ಹಿಂದೂಗಳನ್ನು ಮಾತ್ರ ಟಾರ್ಗೆಟ್ ಯಾಕೆ ಮಾಡುತ್ತೀರಿ ಎಂದು ಹರಿಹಾಯ್ದರು.
ಅಲ್ಲದೇ ಮುಸ್ಲಿಮರು ಒಂದೇ ದೇವರು ಅಂತಾರೆ. ನಾವು ಮುಕ್ಕೋಟಿ ದೇವರನ್ನು ಪೂಜೆ ಮಾಡುತ್ತೇವೆ. ಬೆಳೆಯನ್ನು ನಾವು ಪೂಜೆ ಮಾಡುತ್ತೇವೆ. ನಮ್ಮ ಧರ್ಮ ಯಾಕೆ ಅವಹೇಳನ ಮಾಡುತ್ತೀರಿ. ಇವರನ್ನು ಹೀಗೇ ಬಿಟ್ಟರೆ ಕೊನೆಗೆ ಹೆಣ್ಣು ಮಕ್ಕಳು ಬಳೆಯೂ ಹಾಕಬಾರದು ಎಂಬ ಮನಸ್ಥಿತಿಗೆ ಕಾಂಗ್ರೆಸ್ ಬಂದು ಬಿಡುತ್ತದೆ.ಇನ್ನಾದರೂ ನಿಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಿ. ಟೀಕೆ ಮಾಡುವುದು ಹಿಂದುಗಳನ್ನು ಮಾತ್ರ, ಮುಸ್ಲಿಮರ ಬಗ್ಗೆ ಒಂದಾದರೂ ಮಾತಾಡಿದ್ದೀರಾ? ಹಿಂದು ಧರ್ಮದಲ್ಲಿ ಮಾತ್ರ ಕೆಟ್ಟದು ಇದೆಯೇ? ಬೇರೆ ಧರ್ಮದಲ್ಲಿ ಎಲ್ಲಾ ಒಳ್ಳೆಯದೇ ಇದೆಯೇ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಹಿಂದೂ- ಮುಸ್ಲಿಂ ಪ್ರತ್ಯೇಕವಾಗಿಸುವ ಪ್ರಯತ್ನ: ಶೆಟ್ಟರ್
ಕಾಂಗ್ರೆಸ್‌ನವರಿಗೆ ವೀರ ಸಾವರ್ಕರ್ ಅವರನ್ನು ಬೈಯ್ಯದೇ ಇದ್ದರೆ ಸಮಾಧಾನವೇ ಆಗಲ್ಲ ಅನಿಸುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ. 'ವೀರ ಸಾವರ್ಕರ್ ಅವರು ಬ್ರಿಟಿಷರ ವಿರುದ್ಧ ದಿಟ್ಟ ಹೋರಾಟ ಮಾಡಿದವರು. ಅವರು ಪ್ರಬಲ ಹಿಂದುತ್ವವಾದಿಯಾಗಿದ್ದರು. ಅವರಿಗೆ ವಿಧಿಸಿದ್ದ ಶಿಕ್ಷೆ ಸೋ ಕಾಲ್ಡ್ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರಿಗೂ ನೀಡಿಲ್ಲ. ದೇಶಾದ್ಯಂತ ಹಿಂದೂ- ಮುಸ್ಲಿಮರನ್ನು ದೂರ ಮಾಡಿ, ಮುಸ್ಲಿಮರನ್ನು ಪ್ರತ್ಯೇಕವಾಗಿಡುವ ಪ್ರಯತ್ನಗಳಾಗುತ್ತಿದೆ. ಇದನ್ನು ಮುಸ್ಲಿಮರು ಅರ್ಥ ಮಾಡಿಕೊಳ್ಳಬೇಕು. ಈ ರೀತಿಯಾದರೆ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಆಗುತ್ತದೆ. ಇದರಿಂದ ಏನೂ ಉದ್ಧಾರ ಆಗಲ್ಲ ಹಾನಿ ಆಗುವುದು ಮುಸ್ಲಿಮರಿಗೇ ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದು ಹೇಳಿದರು.