ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಲ್ಲಿ ನಾಡಹಬ್ಬ ದಸರಾಕ್ಕೆ ಅದ್ದೂರಿಯಾಗಿ ಇಂದು ಗುರುವಾರ ಬೆಳಗ್ಗೆ ಚಾಲನೆ ಸಿಕ್ಕಿದೆ.(Mysore Dasara 2024 Inauguration) ಇಂದು ಬೆಳಗ್ಗೆ 9.15 ರಿಂದ 9.40ರ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮೂಲಕ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅಧಿಕೃತ ಚಾಲನೆ ನೀಡಿದರು. ಚಾಮುಂಡಿಬೆಟ್ಟದಲ್ಲಿ ದೇವಿ ದರ್ಶನ ಪಡೆದು ಬಳಿಕ ವೇದಿಕೆ ಕಾರ್ಯಕ್ರಮವನ್ನೂ ಉದ್ಘಾಟಿಸಿದರು.
ಇದಕ್ಕೂ ಮುನ್ನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡದೇವತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಸಾಹಿತಿ ಹಂಪ ನಾಗರಾಜಯ್ಯ ಸೇರಿ ಹಲವರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ದಸರಾ ಉದ್ಘಾಟನೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ ಗಣ್ಯರು ಭಾಗಿಯಾಗಿದ್ದಾರೆ. ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ. ಸಮಾರಂಭಕ್ಕೆ ಜಿಲ್ಲಾಡಳಿತದಿಂದ ವಾಟರ್ ಪ್ರೂಫ್ ಪೆಂಡಾಲ್ ನಿರ್ಮಾಣ ಮಾಡಲಾಗಿದೆ.