ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಶನಿವಾರ ಕೋರ್ಟ್ ಅಕ್ಟೋಬರ್ 8ಕ್ಕೆ ಮುಂದೂಡಿದೆ.
ಜಾಮೀನು ಕೋರಿ ದರ್ಶನ್ ಹಾಗೂ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯಾ ವಿಚಾರಣೆ ನಡೆಸಿದ 57ನೇ ಸಿಸಿಎಚ್ ನ್ಯಾಯಾಲಯ, ವಿಚಾರಣೆಯನ್ನು ಅಕ್ಟೋಬರ್ 8ಕ್ಕೆ ಮುಂದೂಡಿದೆ.
ನಟ ದರ್ಶನ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ಅವರು ಸುದೀರ್ಘ ವಾದ ಮಂಡಿಸಿದ್ದು, ವಾದ ಮಂಡನೆ ಮುಕ್ತಾಯವಾಗಿದೆ. ಅಕ್ಟೋಬರ್ 8 ರಂದು ಎಸ್ ಪಿಪಿ ಪ್ರಸನ್ನ ಕುಮಾರ್ ವಾದ ಮಂಡನೆ ಮಾಡಲಿದ್ದಾರೆ.
ನಿನ್ನೆ ಸಮಯದ ಅಭಾವದಿಂದಾಗಿ ಇಂದಿಗೆ (ಅಕ್ಟೋಬರ್ 05) ಪ್ರಕರಣ ಮುಂದೂಡಲಾಗಿತ್ತು. ಇಂದು ವಾದ ಮುಂದುವರೆಸಿದ ಸಿವಿ ನಾಗೇಶ್ ಅವರು, ದರ್ಶನ್ ಮನೆಯಲ್ಲಿ ಪೊಲೀಸರು ವಶಪಡಿಸಿಕೊಂಡ ಲಕ್ಷಾಂತರ ರೂಪಾಯಿ ಹಣದ ಮೂಲದ ಬಗ್ಗೆ ನ್ಯಾಯಾಲಕ್ಕೆ ಮಾಹಿತಿ ನೀಡಿದರು.
ಜೂ 18ರಂದು ದರ್ಶನ್ ಮನೆಯಲ್ಲಿ 37.5 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದಾದ ಬಳಿಕ ವಿಜಯಲಕ್ಷ್ಮಿ ಅವರಿಗೆ ದರ್ಶನ್ ಅದೇ ಸಮಯದಲ್ಲಿ ನೀಡಿದ್ದಾರೆ ಎನ್ನಲಾದ ಹಣವನ್ನು ವಿಜಯಲಕ್ಷ್ಮಿ ಅವರೇ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಸಾಕ್ಷಿಗಳಿಗೆ ಕೊಡಲೆಂದು ದರ್ಶನ್ ಈ ಹಣ ಇಟ್ಟಿದ್ದಾರೆ ಎಂಬುದಾಗಿ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಆದರೆ ಮೋಹನ್ ರಾಜ್ ಎಂಬುವರು ಈ ಹಣವನ್ನು ಮೇ 2ನೇ ತಾರೀಖಿನಂದೇ ದರ್ಶನ್‌ಗೆ ನೀಡಿದ್ದರು. ಅಸಲಿಗೆ ಇವರು ದರ್ಶನ್ ಅವರಿಂದ ಹಣ ಸಾಲ ಪಡೆದಿದ್ದರು. ಆ ಹಣವನ್ನು ಮೇ 2ರಂದೇ ದರ್ಶನ್‌ಗೆ ನೀಡಬೇಕಿದ್ದ ಸಾಲ ವಾಪಸ್ ಮಾಡಿದ್ದರು. ಆಗ ರೇಣುಕಾಸ್ವಾಮಿ ಯಾರೆಂಬುದು ಜಗತ್ತಿಗೇ ಗೊತ್ತಿರಲಿಲ್ಲ ಎಂದರು ಸಿವಿ ನಾಗೇಶ್ ವಾದಿಸಿದರು.