ಬೆಂಗಳೂರು: ಮಲ್ಲೇಶ್ವರ ರಾಜಾಶಂಕರ್ ಆಟದ ಮೈದಾನದಲ್ಲಿ ಗೇಟ್ ಬಿದ್ದು ಬಾಲಕ ಸಾವನ್ನಪ್ಪಲು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅಧಿಕಾರಿಗಳು ಮುಖ್ಯ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.
ಕಳೆದ ಸೆ.22ರಂದು ಮಲ್ಲೇಶ್ವರದ ರಾಜಾಶಂಕರ್ ಆಟದ ಮೈದಾನದಲ್ಲಿ ಆಡಲು ಬಂದಿದ್ದ ಬಾಲಕ ನಿರಂಜನ್ (11) ಮೇಲೆ ಗೇಟು ಬಿದ್ದು ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಆಟದ ಮೈದಾನದ ಸಂಪೂರ್ಣ ಕಾಮಗಾರಿಯ ಕುರಿತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. 1 ವಾರದೊಳಗೆ ಪರಿಶೀಲಿಸಿ ಸಂಪೂರ್ಣ ವರದಿ ನೀಡುವಂತೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚಿಸಿದ್ದರು.
ಇದರಂತೆ ಸಮಿತಿಯು ಶನಿವಾರ ಮುಖ್ಯ ಆಯುಕ್ತರಿಗೆ ಘಟನೆಗೆ ಆಧರಿಸಿ ವರದಿ ಸಲ್ಲಿಸಿದ್ದು, ವರದಿಯಲ್ಲಿ ಏಳು ಅಂಶಗಳನ್ನು ಎತ್ತಿ ತೋರಿಸಿದ್ದಾರೆ.
ಆಟದ ಮೈದಾನದಲ್ಲಿ ನಿರ್ವಹಣೆ ಕೊರತೆ, ಕ್ಲ್ಯಾಂಪ್‌ಗಳು ತುಕ್ಕು ಹಿಡಿದಿರುವ ಬಗ್ಗೆ ಸಾರ್ವಜನಿಕರ ದೂರುಗಳು ಬಂದರೂ ಕ್ರಮ ಕೈಗೊಳ್ಳದಿರುವುದು, ಅಧಿಕಾರಿಗಳ ನಿರ್ಲಕ್ಷ್ಯ, ಆಟದ ಮೈದಾನ ನಿರ್ವಹಣೆ ಮಾಡಬೇಕಿದ್ದ ಏಜೆನ್ಸಿ ಹಾಗೂ ಕಾಲಕಾಲಕ್ಕೆ ತಪಾಸಣೆ ನಡೆಸಬೇಕಾದ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷಿಸಿರುವುದು, 216 ಕೆಜಿ ತೂಕದ ಕಬ್ಬಿಣದ ಗೇಟ್‌ನ ವೆಲ್ಡಿಂಗ್ ವೈಫಲ್ಯ, ಗೇಟ್ ಅನ್ನು ಸಂಪೂರ್ಣವಾಗಿ ಹಿಡಿದಿಡಲು ಹೆವಿ ಬೇರಿಂಗ್ ಕ್ಲಾಂಪ್‌ಗಳ ಕೊರತೆ ಮುಂತಾದ ಅಂಶಗಳನ್ನು ಆಯುಕ್ತರ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಆಟದ ಮೈದಾನಕ್ಕೆ ಇಷ್ಟೊಂದು ತೂಕದ ಗೇಟ್ ಅಗತ್ಯವೂ ಇರಲಿಲ್ಲ ಎಂದು ಸಮಿತಿ ತಿಳಿಸಿದೆ ಎಂದು ತಿಳಿದುಬಂದಿದೆ.
ಇದರ ಜೊತೆಗೆ ರಾಜಶಂಕರ್ ಪಾರ್ಕ್‌ನೊಳಗೆ ವಾಹನಗಳನ್ನು ಅನುಮತಿ ನೀಡಿರುವುದು, ಪಾಲಿಕೆ ಅನುಮತಿಯಿಲ್ಲದೆ ಕಾರ್ಯಕ್ರಮಗಳು ಮತ್ತು ಕ್ರಿಕೆಟ್ ಪಂದ್ಯಗಳನ್ನು ನಡೆಸಿರುವುದು, ಹಾಳಾದ ಗೇಟ್ ಅನ್ನು ಮತ್ತೆ ವೆಲ್ಡಿಂಗ್ ಮಾಡಿರುವುದು, ಈ ಕೆಲಸ ಮಾಡಿದಾತ ಕಳಪೆ ಗುಣಮಟ್ಟದ ಕಾಮಗಾರಿ ಮಾಡಿರುವುದು ಘಟನೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ವರದಿ ಸ್ವೀಕರಿಸಿರುವ ತುಷಾರ್ ಗಿರಿನಾಥ್ ಅವರು, ವರದಿ ಪೂರ್ಣವಾಗಿಲ್ಲ. ಗೇಟ್ ಬಿದ್ದ ಕಾರಣವನ್ನು ಮಾತ್ರ ತಿಳಿಸಲಾಗಿದೆ. ಇನ್ನೆರಡು ದಿನ ತೆಗೆದುಕೊಂದು ಮತ್ತೊಂದು ಸುದೀರ್ಘ ವರದಿ ಸಲ್ಲಿಸಿ ಎಂದು ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಬಿಬಿಎಂಪಿ ಈಗಾಗಲೇ ಸಹಾಯಕ ಎಂಜಿನಿಯರ್ ಶ್ರೀನಿವಾಸರಾಜು ಅವರನ್ನು ಅಮಾನತುಗೊಳಿಸಿದೆ.
ಇದೀಗ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೆ ಶಾಂತಲಾ, ದೇವರಾಜು ಮತ್ತು ಬೀಬಿ ಆಯೇಷಾ ಹುಸೇನ್ ಅವರನ್ನು ಅಮಾನತುಗೊಳಿಸಲು ಸಿದ್ಧತೆ ನಡೆಸಿದ್ದು, ಕಾರ್ಯಪಾಲಕ ಎಂಜಿನಿಯರ್ ಎಲ್ ವೆಂಕಟೇಶ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ ಎಂದು ತಿಳಿದುಬಂದಿದೆ.
ಅಂತಿಮ ವರದಿ ಬಂದ ನಂತರ ಇನ್ನಷ್ಟು ಮಂದಿ ತಲೆದಂಡವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಸುಳಿವು ನೀಡಿದ್ದಾರೆ.