ಬೆಂಗಳೂರು: ಜಾತಿಗಣತಿ ಕುರಿತಂತೆ ಸಚಿವ ಸಂಪುಟ ಸಭೆ ಮಾಡಿ ತೀರ್ಮಾನಿಸಲಾಗುತ್ತದೆ ಎಂದು ಗೃಹ ಸಚಿವ ಡಾ .ಜಿ ಪರಮೇಶ್ವರ್ ಹೇಳಿದ್ದಾರೆ.
ಜಾತಿಗಣತಿ ಕುರಿತಂತೆ ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ವ್ಯಾಪಕ ಚರ್ಚೆ ನಡೆಯುತ್ತಿರುವಂತೆಯೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ .ಜಿ ಪರಮೇಶ್ವರ್ ರಾಜ್ಯದ ಜನಗಣತಿ ವರದಿಯನ್ನು ಕ್ಯಾಬಿನೆಟ್ ಸಭೆ ಮುಂದೆ ತಂದು ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್, 'ಇದೊಂದು ವಿಚಿತ್ರ ಸಂದರ್ಭ. ಜಾತಿ ಜನಗಣತಿ ಸ್ವೀಕಾರ ಮಾಡಿಲ್ಲ ಅಂದ್ರೆ ಮಾಡಿಲ್ಲ ಅಂತಾರೆ. ಮಾಡಿದರೆ ಯಾಕೆ ಈಗ ಮಾಡುತ್ತೀರಿ ಅಂತ ವ್ಯಾಖ್ಯಾನ ಮಾಡ್ತಾರೆ.
ಜನಗಣತಿ ಸ್ವೀಕಾರ ವಿಳಂಬಕ್ಕೂ ಕಾರಣಗಳಿವೆ. ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ಅಸೆಂಬ್ಲಿಗೆ ತರಬೇಕಾ, ಬೇಡವಾ ಎಂದು ತೀರ್ಮಾನಿಸುತ್ತೇವೆ. ಅಸೆಂಬ್ಲಿಗೆ ಬೇಕಾಗಿಲ್ಲ ಅಂತ ಕ್ಯಾಬಿನೆಟ್ ತೀರ್ಮಾನ ಮಾಡಿದರೆ ಮುಗೀತು ಎಂದರು.
ಅಂತೆಯೇ 'ಕೇಂದ್ರ ಜನಗಣತಿ ಕೂಡ ಆಗಲಿ. ಓವರ್ ಲ್ಯಾಪ್ ಆಗಿದ್ದರೆ ಮುಂದೆ ಸರಿಪಡಿಸಿಕೊಳ್ಳಬಹುದು. ಯಾವುದಾದರೂ ಸಮುದಾಯದ ಅಂಕಿ ಸಂಖ್ಯೆ ಹೆಚ್ಚು ಕಮ್ಮಿ ಆಗಿದ್ದರೆ ಆಮೇಲೆ ಸರಿ ಮಾಡಿಕೊಳ್ಳಬಹುದು. ಯಾವಾಗಲೂ ಕೇಂದ್ರ ಸರ್ಕಾರದ ಜನಗಣತಿಯನ್ನೇ ಎಲ್ಲರೂ ಪರಿಗಣಿಸುತ್ತಾರೆ ಮತ್ತು ಉಪಯೋಗಿಸುತ್ತಾರೆ.
ಒಂದು ಸಾರಿ ಕ್ಯಾಬಿನೆಟ್ಗೆ ಬಂದು ಚರ್ಚೆಯಾಗಲಿ, ಆಮೇಲೆ ನೋಡೋಣ. ರಾಜ್ಯ ಸರ್ಕಾರ 160 ಕೋಟಿ ರೂಪಾಯಿ ಖರ್ಚು ಮಾಡಿದೆ. ಅದಕ್ಕೂ ಲೆಕ್ಕ ಕೊಡಬೇಕು. ನಾಳೆ ಸಿಎಜಿ ಕೂಡ ಇದಕ್ಕೆ ಆಕ್ಷೇಪ ಮಾಡಬಹುದು ಎಂದು ಪರಮೇಶ್ವರ್ ಹೇಳಿದರು.