ಬೆಂಗಳೂರು: ಇಂಡಿಗೋ ವಿಮಾನವೊಂದು ನಿನ್ನೆ ಶನಿವಾರ ಮಧ್ಯಾಹ್ನ ಬೆಂಗಳೂರಿನಿಂದ ಕೋಲ್ಕತ್ತಾಗೆ ಟೇಕಾಫ್ ಆದ ತಕ್ಷಣ 40ರ ಆಸುಪಾಸಿನಲ್ಲಿದ್ದ ವ್ಯಕ್ತಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಘಟನೆ ನಡೆಯಿತು. ಅದೃಷ್ಟವಶಾತ್ ವಿಮಾನದಲ್ಲಿದ್ದ ಮೂವರು ವೈದ್ಯರು ಅವರಿಗೆ ಕೂಡಲೇ ತುರ್ತು ಪ್ರಾರ್ಥಮಿಕ ಚಿಕಿತ್ಸೆ ನೀಡಿ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಕರೆದೊಯ್ಯುವಲ್ಲಿ ಯಶಸ್ವಿಯಾದ ಘಟನೆ ನಡೆದಿದೆ.
ನಿಮ್ಹಾನ್ಸ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಒಂದು ದಿನದ ಹಿಂದೆ ಚಿನ್ನದ ಪದಕವನ್ನು ಪಡೆದ ಡಾ ಎಂ ಎಂ ಸಮೀಮ್ ಮತ್ತು ಅವರ ಪತ್ನಿ ಮಕ್ಕಳ ತಜ್ಞೆ ಡಾ ನಜ್ನಿನ್ ಪರ್ವಿನ್ ಮತ್ತು ಎಂ ಎಸ್ ರಾಮಯ್ಯ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದವರಾಗಿದ್ದಾರೆ. ಅವರ ಸಮಯೋಚಿತ ಚಿಕಿತ್ಸಾ ಕ್ರಮದಿಂದ ಭುವನೇಶ್ವರ ವಿಮಾನ ನಿಲ್ದಾಣಕ್ಕೆ ಸಂಭಾವ್ಯ ತುರ್ತು ಭೂಸ್ಪರ್ಶ ಮಾಡುವುದನ್ನು ತಪ್ಪಿಸಲಾಯಿತು. ಹೀಗೆ ಆಗುತ್ತಿದ್ದರೆ ವಿಮಾನದಲ್ಲಿದ್ದ ಸುಮಾರು 200ಕ್ಕೂ ಹೆಚ್ಚು ಪ್ರಯಾಣಿಕರಿಗೆ ವಾರಾಂತ್ಯ ತಮ್ಮ ಪ್ರಯಾಣ ಮತ್ತು ಕೆಲಸದ ಯೋಜನೆಗಳಲ್ಲಿ ವ್ಯತ್ಯಾಸವಾಗುತ್ತಿತ್ತು.
ಆಗಿದ್ದೇನು?: ಇಂಡಿಗೊ ವಿಮಾನ ಸಂಖ್ಯೆ 6ಇ 503 ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ರಿಂದ 20 ನಿಮಿಷ ತಡವಾಗಿ 10.42 ಕ್ಕೆ ನಿನ್ನೆ ಹೊರಟಿತ್ತು. ಒಂದು ಗಂಟೆಯ ನಂತರ ಕೇರಳದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುವ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ಅವರು ತಮ್ಮ ದೀರ್ಘಕಾಲದ ಯಕೃತ್ತಿನ ಕಾಯಿಲೆಗೆ ಚಿಕಿತ್ಸೆಗಾಗಿ ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಲು ತಮ್ಮ ಮಗನೊಂದಿಗೆ ಹೋಗುತ್ತಿದ್ದರು.
ವಿಮಾನದ 1B ಸೀಟಿನಲ್ಲಿ ಕುಳಿತಿದ್ದ ನಿವೃತ್ತ ಚಾರ್ಟರ್ಡ್ ಅಕೌಂಟೆಂಟ್ ಹರಿಲಕ್ಷ್ಮಿ ರತನ್ ಘಟನೆ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಿಬ್ಬಂದಿಗೆ ವಿವರಿಸಿದ್ದಾರೆ. ಪ್ರಯಾಣ ಮಧ್ಯದಲ್ಲಿ ವಿಮಾನದ ಮಧ್ಯದಲ್ಲಿ ಕುಳಿತಿದ್ದ ವ್ಯಕ್ತಿ ರಕ್ತ ವಾಂತಿ ಮಾಡಲು ಪ್ರಾರಂಭಿಸಿದರು. ಆಗ ಕ್ಯಾಬಿನ್ ಸಿಬ್ಬಂದಿ ವಿಮಾನದಲ್ಲಿ ಯಾರಾದರೂ ವೈದ್ಯರಿದ್ದೀರಾ ದಯವಿಟ್ಟು ಬಂದು ಸಹಾಯ ಮಾಡಿ ಎಂದು ಕೂಗಿದರಂತೆ. ಆಗ ಈ ಕಿರಿಯ ವೈದ್ಯರು ರೋಗಿಗೆ ಸಹಾಯ ಮಾಡಲು ಬಂದು ತುರ್ತಾಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದರು.
ಸಿಲಿಗುರಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ ಪರ್ವಿನ್ ಕೂಡಲೇ ರೋಗಿ ಬಳಿ ಧಾವಿಸಿ, ಉಸಿರಾಡಲು ಕಷ್ಟಪಡುತ್ತಿದ್ದ ರಕ್ತ ವಾಂತಿ ಮಾಡುತ್ತಿದ್ದವರ ಬಳಿ ಬಂದಾಗ ರೋಗಿಗೆ ಬಿಪಿ ಕಡಿಮೆಯಾಗಿದೆ ಎಂದು ಗೊತ್ತಾಯಿತು. ವಿಮಾನದಲ್ಲಿದ್ದ ಆಕ್ಸಿಜನ್ ಸಿಲಿಂಡರ್ ನೀಡಿದರು. ಸಾಮಾನ್ಯ ಸಲೈನ್‌ನಿಂದ ಡ್ರಿಪ್ಸ್ ನೀಡಿದರು. ಅವೆಲ್ಲವೂ ವಿಮಾನದಲ್ಲಿ ಲಭ್ಯವಿರುತ್ತದೆ. ಕೂಡಲೇ ರೋಗಿಯ ವಾಂತಿ ನಿಯಂತ್ರಣಕ್ಕೆ ಬಂತು. ಆಕ್ಸಿಮೀಟರ್ ನಲ್ಲಿ ಸಹ ಸ್ಥಿರವಾದ ಆಮ್ಲಜನಕದ ಮಟ್ಟವನ್ನು ತೋರಿಸಿತು. (95) "ರೋಗಿಯ ವೈದ್ಯಕೀಯ ದಾಖಲೆಗಳನ್ನು ನೋಡಿದಾಗ ಅವರು ತಮ್ಮ ದೀರ್ಘಕಾಲದ ಯಕೃತ್ತಿನ ಸ್ಥಿತಿಗೆ ಚಿಕಿತ್ಸೆ ಪಡೆಯಲು ಕೋಲ್ಕತ್ತಾಗೆ ಹೋಗುತ್ತಿದ್ದಾರೆಂದು ಗೊತ್ತಾಯಿತು.
ಸಿಲಿಗುರಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಡಾ. ಸಮೀಮ್, ನಾವು ಕೊಟ್ಟ ಚಿಕಿತ್ಸೆಯಲ್ಲಿ ರೋಗಿ ಸಹಜ ಸ್ಥಿತಿಗೆ ಬಂದಿದ್ದು ಖುಷಿಯಾಯಿತು. ಒಂದು ಹಂತದಲ್ಲಿ ವಿಮಾನದ ಪೈಲಟ್ ವಿಮಾನವನ್ನು ಭುವನೇಶ್ವರ ನಿಲ್ದಾಣಕ್ಕೆ ತೆಗೆದುಕೊಂಡು ಹೋಗಬೇಕೆ ಎಂದು ಕೇಳಿದ್ದರು. ಹಾಗಾಗುತ್ತಿದ್ದರೆ ಕಷ್ಟವಾಗುತ್ತಿತ್ತು. ರೋಗಿಯ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸಬಲವಿಲ್ಲದ ಕಾರಣ ಬೇರೆ ನಗರಕ್ಕೆ ಹೋಗಿ ಚಿಕಿತ್ಸೆ ಪಡೆಯಲು ಕಷ್ಟವಾಗಬಹುದು ಎಂದು ನಾನು ಅರಿತು ಅವರ ಊರಿಗೇ ಹೋಗುವುದು ಉತ್ತಮವೆಂದು ನಾನು ಭಾವಿಸಿದೆ ಎನ್ನುತ್ತಾರೆ.
ವಿಮಾನವು ಮಧ್ಯಾಹ್ನ 1.24 ಕ್ಕೆ ಕೋಲ್ಕತ್ತಾ ತಲುಪಿತು. ಇಂಡಿಗೋ ವೈದ್ಯರು ಕೂಡಲೇ ಬಂದು ರೋಗಿಯನ್ನು ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯುವ ವ್ಯವಸ್ಥೆ ಮಾಡಿದರು.
ತಾನು ಪ್ರತ್ಯಕ್ಷವಾದದ್ದನ್ನು ಕಂಡಿದ್ದರಿಂದ ಭಾವೋದ್ವೇಗಕ್ಕೆ ಒಳಗಾದ ಹರಿಲಕ್ಷ್ಮಿ ರತನ್, ಪ್ರಯಾಣಿಕರು ಬ್ಯಾಗೇಜ್ ಬೆಲ್ಟ್ ಬಳಿ ತಮ್ಮ ಸಾಮಾನುಗಳನ್ನು ಸಂಗ್ರಹಿಸಲು ಕಾಯುತ್ತಿರುವಾಗ ವೈದ್ಯರನ್ನು ಶ್ಲಾಘಿಸುವ ಭಾಷಣ ಮಾಡಿದರು.