ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಅಲಿ ಆತ್ಮಹತ್ಯೆ?; ಜಾತಿಗಣತಿ ವರದಿ ಬಿಡುಗಡೆ ಕುರಿತು ಚರ್ಚೆ; ಕೇಕ್ ತಿಂದು 5 ವರ್ಷದ ಬಾಲಕ ಸಾವು! ಇವು ಇಂದಿನ ಪ್ರಮುಖ ಸುದ್ದಿಗಳು 07-10-24

Published On : 7 Oct 2024, 9:20 pm
Vishwanath S

1. ಅ.18ರ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಬಿಡುಗಡೆ ಕುರಿತು ಚರ್ಚೆ

ಅಕ್ಟೋಬರ್ 10ರಂದು ನಿಗದಿಯಾಗಿದ್ದ ಸಂಪುಟ ಸಭೆಯನ್ನು ವಾಲ್ಮೀಕಿ ಜಯಂತಿ ಇರುವ ಕಾರಣ ಅಕ್ಟೋಬರ್ 18ರಂದು ನಡೆಸಲು ತೀರ್ಮಾನಿಸಲಾಗಿದ್ದು, ಅಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಬಿಡುಗಡೆ ಕುರಿತು ಚರ್ಚಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಸಂಸದರು, ಶಾಸಕರ ಜೊತೆ ಸಭೆ ನಡೆಸಿದ್ದು ಜಾತಿಜನಗಣತಿ ವರದಿ ಜಾರಿ ಮಾಡುವಂತೆ ಮನವಿ ಪತ್ರ ನೀಡಿದ್ದಾರೆ ಎಂದರು. ಈಮಧ್ಯೆ, ಜಾತಿಗಣತಿ ವರದಿ ಅನುಷ್ಠಾನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮುಡಾ ಹಗರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜಾತಿಗಣತಿ ವಿಷಯವನ್ನು ಮುನ್ನಲೆಗೆ ತಂದು ನಾಟಕ ಆಡಲಾಗುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. 10 ವರ್ಷಗಳ ಹಿಂದೆ ತಯಾರಿಸಲಾದ ಜಾತಿ ಗಣತಿ ವರದಿಯ ಪ್ರಸ್ತುತತೆಯ ಬಗ್ಗೆ ಪ್ರಶ್ನಿಸಿದ ಕುಮಾರಸ್ವಾಮಿ, ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿದರು.

2. ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಅಲಿ ಶವಪತ್ತೆ

ಭಾನುವಾರ ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ ಅವರ ಮೃತದೇಹ ಇಂದು ಬೆಳಗ್ಗೆ ಉಡುಪಿ- ಮಂಗಳೂರಿನ ಕೂಳೂರಿನ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ. ನಿನ್ನೆ ಸೇತುವೆಯ ಮೇಲೆ ಮುಮ್ತಾಜ್ ಅವರ ಕಾರು ಪತ್ತೆಯಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಮೇರೆಗೆ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಮುಮ್ತಾಜ್ ಅಲಿ ಹನಿಟ್ರ್ಯಾಪ್‌ಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆ ರೆಹಮತ್, ಅಬ್ದುಲ್ ಸತ್ತಾರ್, ಶಫಿ, ಮುಸ್ತಾಫ, ಶೋಯೆಬ್ ಹಾಗೂ ಸಿರಾಜ್ ಸೇರಿ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಈ ಪೈಕಿ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಖತರ್ನಾಕ್ ತಂಡವು ಹನಿಟ್ರ್ಯಾಪ್‌ ಮೂಲಕ ಅಲಿಯಿಂದ ಈವರೆಗೆ 50 ಲಕ್ಷ ವಸೂಲಿ ಮಾಡಿದ್ದರೆ, ಚೆಕ್ ಮೂಲಕ 25 ಲಕ್ಷ ರೂಪಾಯಿಯನ್ನು ಮಹಿಳೆ ಪಡೆದಿದ್ದಾಳೆ ಎಂಬ ಅಂಶ ಪತ್ತೆಯಾಗಿದೆ.

3. ಬಿಟ್ ಕಾಯಿನ್ ಹಗರಣ: ಡಿವೈಎಸ್ಪಿ ಶ್ರೀಧರ್ ಪೂಜಾರಿ ಬಂಧಿಸಿದ ಎಸ್ಐಟಿ

ಬಹುಕೋಟಿ ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ಶ್ರೀಧರ್ ಪೂಜಾರಿ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಬಿಟ್ ಕಾಯಿನ್ ಪ್ರಕರಣದ ತನಿಖೆ ವೇಳೆ ಎವಿಡೆನ್ಸ್ ಟ್ಯಾಂಪರಿಂಗ್ ಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಕರೆಸಿ ಸಿಐಡಿ ಕಚೇರಿಯಲ್ಲೇ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಎಸ್ಐಟಿ ರಚನೆ ಬಳಿಕ ಕಾಟನ್ಪೇಟೆ ಠಾಣೆಯಲ್ಲಿ ಶ್ರೀಧರ್ ವಿರುದ್ಧ ಹೊಸ ಎಫ್ಐಆರ್ ದಾಖಲಾಗಿತ್ತು. ಕಾಟನ್ಪೇಟೆ ಠಾಣೆಯ ಪ್ರಕರಣವನ್ನೂ ಸಹ ಎಸ್ಐಟಿ ತನಿಖೆ ನಡೆಸುತ್ತಿದ್ದು, ಸದ್ಯ ಡಿವೈಎಸ್ಪಿ ಶ್ರೀಧರ್ ಪೂಜಾರಿಯನ್ನು ಎಸ್ಐಟಿ ಅಧಿಕಾರಿಗಳು ಕೋರ್ಟ್ಗೆ ಹಾಜರುಪಡಿಸಲಿದ್ದಾರೆ. DySP ಶ್ರೀಧರ್ ಈ ಹಿಂದೆ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಬಂಧಿಸಿ ವಿಚಾರಣೆ ನಡೆಸಿದ್ದರು.

Advertisement

Advertisement

4. ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು

ಬೆಂಗಳೂರು ದಕ್ಷಿಣ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಚಿಕ್ಕನಹಳ್ಳಿ ಗ್ರಾಮದ ನಿವಾಸಿ 50 ವರ್ಷದ ಮಂಜಮ್ಮ ಮೃತ ಮಹಿಳೆಯಾಗಿದ್ದಾರೆ. ಮನೆ ಬಳಿ ನಿಂತಿದ್ದಾಗ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಮೈಮೇಲೆ ಬಿದ್ದಿದೆ. ಮಹಿಳೆಯನ್ನು ರಕ್ಷಿಸಲು ಅಲ್ಲಿದ್ದ ಕೆಲವರು ಯತ್ನಿಸಿದ್ದರೂ ಆದರೆ ಅವರಿಗೂ ಕರೆಂಟ್ ಹೊಡೆದಿದ್ದರಿಂದ ಅವರು ದೂರ ಸರಿಯುವಂತಾಗಿದೆ. ಈ ಸಂಬಂಧ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪೊಲೀಸರು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

5. ಕೇಕ್ ತಿಂದು ಐದು ವರ್ಷದ ಬಾಲಕ ಸಾವು

ದಾರುಣ ಘಟನೆಯೊಂದರಲ್ಲಿ, ಫುಡ್ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ತಂದೆ ಮನೆಗೆ ತಂದಿದ್ದ ಕೇಕ್ ತಿಂದು 5 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಕೇಕ್ ಆರ್ಡರ್ ಕ್ಯಾನ್ಸಲ್ ಆದ ಬಳಿಕ ತಂದೆ ಅದನ್ನು ಮನೆಗೆ ತಂದಿದ್ದು, ಭಾನುವಾರ ರಾತ್ರಿ ಮನೆಯವರು ಅದನ್ನು ತಿಂದಿದ್ದಾರೆ. ಸೋಮವಾರ ಬೆಳಿಗ್ಗೆ, ಮೂವರೂ ಅಸ್ವಸ್ಥರಾಗಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೆ ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು. ಪೋಷಕರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕೆಪಿ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement