ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣವು ಹರಿಯಾಣದಲ್ಲಿ ಪಕ್ಷದ ಭವಿಷ್ಯದ ಮೇಲೆ ಪರಿಣಾಮ ಬೀರಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೋಳಿವಾಡ, ಹರಿಯಾಣ ಚುನಾವಣಾ ಪ್ರಚಾರದ ವೇಳೆ ಮುಡಾ ಹಗರಣವು ಕಾಂಗ್ರೆಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು, ಪದೇ ಪದೇ ಮುಡಾ ಹಗರಣವನ್ನು ಪ್ರಸ್ತಾಪಿಸಿದ್ದು ಪಕ್ಷದ ಹಿನ್ನಡೆಗೆ ಕಾರಣವಾಗಿದೆ ಎಂದರು. ಅಲ್ಲದೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ತಮ್ಮ ಈ ಹಿಂದೆ ನೀಡಿದ ಹೇಳಿಕೆಗೆ ಬದ್ಧವಾಗಿರುವುದಾಗಿ ಹೇಳಿದರು. ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ಬಂದಿದೆ. ಹರಿಯಾಣವನ್ನು ಗೆದ್ದೇ ಬಿಡುತ್ತೇವೆ ಎಂಬ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.
ಮಂಗಳೂರಿನ ಕುಳೂರಿನ ಫಲ್ಗುಣಿ ನದಿಗೆ ಹಾರಿ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಉದ್ಯಮಿ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳಕ್ಕೆ ಪರಾರಿಯಾಗಿದ್ದ ಎ1 ಆರೋಪಿ ಆಯಿಷಾ ಅಲಿಯಾಸ್ ರೆಹಮತ್, ಎ5 ಆರೋಪಿ ಶೊಹೇಬ್ ಮತ್ತು ಸಿರಾಜ್ ಎಂಬುವವರನ್ನು ಕಲ್ಲಡ್ಕ ಬಳಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಪ್ರಕರಣದ ಮಾಸ್ಟರ್ಮೈಂಡ್ ಆಗಿರುವ ಎ2 ಆರೋಪಿ ಅಬ್ದುಲ್ ಸತ್ತಾರ್ಗಾಗಿ ಶೋಧ ನಡೆದಿದೆ. ಮುಮ್ತಾಜ್ ಅಲಿ ಆತ್ಮಹತ್ಯೆ ಮಾಡಿಕೊಳ್ಳಲು ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್ ಮೇಲ್ ಕಾರಣ ಎಂದು ಅಲಿ ಕುಟುಂಬಸ್ಥರು ಆರೋಪಿಸಿದ್ದರು. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಪೊಲೀಸರು ಡ್ರಗ್ಸ್ ವಿರುದ್ಧ ಸಮರ ಸಾರಿದ್ದು, ಕಳೆದ ತಿಂಗಳು ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದ ಮೂವರು ವಿದೇಶಿ ಪ್ರಜೆಗಳು ಸೇರಿದಂತೆ 67 ಮಂದಿಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ. ನಗರದಲ್ಲಿ ಡ್ರಗ್ಸ್ ದಂಧೆ, ಮಾದಕ ದ್ರವ್ಯ ಸಾಗಣೆ ಅಥವಾ ಮಾದಕ ದ್ರವ್ಯ ಸೇವನೆಗೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಅಪರಾಧಿಗಳನ್ನು ಗುರುತಿಸಲು ಮತ್ತು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲು ನಗರದ ಪ್ರತಿಯೊಂದು ಭಾಗದಲ್ಲೂ ದಾಳಿ ನಡೆಸಲಾಗುವುದು ಎಂದರು. ಸೆಪ್ಟೆಂಬರ್‌ನಲ್ಲಿ ನಗರ ಪೊಲೀಸರು NDPS ಕಾಯ್ದೆಯಡಿ 40 ಪ್ರಕರಣಗಳನ್ನು ಪತ್ತೆ ಹಚ್ಚಿದ್ದು, ಸುಮಾರು 67 ಜನರನ್ನು ಬಂಧಿಸಿದ್ದಾರೆ. ಅದರಲ್ಲಿ ಮೂವರು ವಿದೇಶಿಗರಿದ್ದಾರೆ. ಬಂಧಿತರಿಂದ 170 ಕೆಜಿ ಗಾಂಜಾ, 2 ಕೆಜಿ ಅಫೀಮು, 13 ಗ್ರಾಂ ಕೊಕೇನ್, 372 ಗ್ರಾಂ 'MDMA' ಮತ್ತು 998 'ಎಕ್ಸ್ಟಸಿ' ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ಪವಿತ್ರಾ ಹಾಗೂ ಇತರೆ ಕೆಲವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮತ್ತೊಮ್ಮೆ ಮುಂದೂಡಿದೆ. ದರ್ಶನ್ ಪರ ವಕೀಲರು ಪ್ರಕರಣದ ತನಿಖೆ ಬಗ್ಗೆ ಎತ್ತಿದ್ದ ಪ್ರಶ್ನೆಗಳಿಗೆ ಇಂದು ಎಸ್ಪಿಪಿ ಪ್ರಸನ್ನ ಕುಮಾರ್ ಉತ್ತರಗಳನ್ನು ನೀಡಿದರು. ಎಸ್ಪಿಪಿ ಸುದೀರ್ಘ ವಾದ ಮಂಡಿಸಿದ್ದರಿಂದ ಅಂತಿಮವಾಗಿ ನ್ಯಾಯಾಲಯದ ಸಮಯ ಮೀರಿದ ಕಾರಣ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಪ್ರಕರಣದ ವಿಚಾರಣೆಯನ್ನು ನಾಳೆ ಮಧ್ಯಾಹ್ನ 12:30ಕ್ಕೆ ಮುಂದೂಡಿದೆ. ದರ್ಶನ್ ಪರ ವಾದಿಸಿದ್ದ ಹಿರಿಯ ವಕೀಲ ಸಿವಿ ನಾಗೇಶ್ ಅವರು ತನಿಖೆಯಲ್ಲಿ ಹಲವು ಲೋಪದೋಷಗಳಿವೆ. ಪೊಲೀಸರೇ ಸಾಕ್ಷ್ಯಗಳನ್ನು ಸೃಷ್ಟಿ ಮಾಡಿ, ಕತೆ ಹೆಣೆದಿದ್ದಾರೆ ಎಂದು ಟೀಕಿಸಿದ್ದರು. ಇದಕ್ಕೆ ಉತ್ತರಿಸಿದ ಪ್ರಸನ್ನ ಕುಮಾರ್ ಅವರು, ದರ್ಶನ್ ಹಾಗೂ ಅವರ ತಂಡ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದ ರೀತಿ, ಆ ನಂತರ ನಡೆದ ಘಟನೆಗಳು, ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆ ಎಲ್ಲವನ್ನೂ ಉಲ್ಲೇಖಿಸಿ, ಇದು ದರ್ಶನ್ ರಕ್ತಚರಿತ್ರೆ ಎಂದು ಟೀಕೆ ಮಾಡಿದರು.
ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಆರ್ಟಿಓ ಚೆಕ್ ಪೋಸ್ಟ್ಗಳ ಮೇಲೆ ದಾಳಿ ಮಾಡಿದ್ದಾರೆ. ಕೋಲಾರ, ಬೀದರ್, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಆರ್ಟಿಓ ಚೆಕ್ ಪೋಸ್ಟ್ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದರು. ವಿಜಯಪುರದ ಝಳಕಿ ಚೆಕ್ ಪೋಸ್ಟ್ ನಲ್ಲಿ 2 ಲಕ್ಷ ರೂಪಾಯಿ ವಶಕ್ಕೆ ಪಡೆದಿದ್ದರೆ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಕ್ರಾಸ್ ಚೆಕ್ ಪೋಸ್ಟ್ ಹಾಗೂ ನಂಗಲಿ ಆರ್ಟಿಓ ಚೆಕ್ ಪೋಸ್ಟ್ ನಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಹಣ ಪತ್ತೆಯಾಗಿದೆ. ಇನ್ನು ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ 45 ಸಾವಿರ ಮತ್ತು ಬೀದರ್ ನ ಹುಮ್ನಾಬಾದ್ ಆರ್ಟಿಓ ಚೆಕ್ ಪೋಸ್ಟ್ ನಲ್ಲೂ 45 ಸಾವಿರ ಹಣವನ್ನು ವಶಕ್ಕೆ ಪಡೆಯಲಾಗಿದೆ.