ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್  
ರಾಜ್ಯ

ಜಾತಿ ಗಣತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿಲ್ಲ: ಸಿಎಂ ಸಿದ್ದರಾಮಯ್ಯ

ಜಾತಿ ಜನಗಣತಿ ಬಗ್ಗೆ ಬಿಜೆಪಿಗೆ ಯಾವ ತಕರಾರು-ವಿರೋಧ ಇಲ್ಲ, ಅದರ ಅನುಷ್ಠಾನಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ” ಎಂಬ ವಿರೋಧಪಕ್ಷದ ನಾಯಕರಾದ ಅಶೋಕ್ ಅವರ ಹೇಳಿಕೆಯನ್ನು ಓದಿ ಮನಸ್ಸು ನಿರಾಳವಾಯಿತು.

ಬೆಂಗಳೂರು: ಜಾತಿ ಗಣತಿ ವರದಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ವಿರೋಧ ಪಕ್ಷದ ನಾಯಕರ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತಳ್ಳಿ ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಬಗ್ಗೆ ಬಿಜೆಪಿಗೆ ಯಾವ ತಕರಾರು-ವಿರೋಧ ಇಲ್ಲ, ಅದರ ಅನುಷ್ಠಾನಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇರುತ್ತದೆ” ಎಂಬ ವಿರೋಧಪಕ್ಷದ ನಾಯಕರಾದ ಅಶೋಕ್ ಅವರ ಹೇಳಿಕೆಯನ್ನು ಓದಿ ಮನಸ್ಸು ನಿರಾಳವಾಯಿತು. ಅಶೋಕ್ ಅವರೇ ನಮ್ಮ ಪಕ್ಷದೊಳಗಿನ ತಕರಾರುಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಬೇಡಿ, ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ನೀವು ನುಡಿದಂತೆ ನಡೆದರೆ ಜಾತಿ ಜನಗಣತಿ ಜಾರಿಯಾಗಿ ನೀವೇ ಹೇಳಿಕೊಂಡಿರುವ ನಿಮ್ಮ ಪಕ್ಷದ ಕನಸಿನ “ಅಂತ್ಯೋದಯ’’ ಸಾಕಾರಗೊಳ್ಳುತ್ತದೆ ಎಂಬ ವಿಶ್ವಾಸ ನನಗಿದೆ. ನೀವು ಮಾತ್ರ, ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದು ಅಷ್ಟೆ ಎಂದು ಟಾಂಗ್ ನೀಡಿದರು.

2018ರಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದರೂ ಅಂಕಿಅಂಶಗಳ ಪರಿಶೀಲನಾ ಕಾರ್ಯ ಪೂರ್ಣಗೊಳ‍್ಳದೆ ಇದ್ದ ಕಾರಣ ಆ ಅವಧಿಯಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಬೇರೆ ಯಾವ ಕಾರಣಗಳು ಇರಲಿಲ್ಲ. ಈಗ ವರದಿ ಬಿಡುಗಡೆಗೆ ಸಿದ್ಧವಾಗಿದೆ. ಅದನ್ನು ಅಂಗೀಕರಿಸಲು ನಮ್ಮ ಪಕ್ಷ ಮತ್ತು ಸರ್ಕಾರ ಕೂಡಾ ಬದ್ಧವಾಗಿದೆ. ನಮ್ಮ ಪಕ್ಷದ ಎಲ್ಲ ನಾಯಕರು ತಾತ್ವಿಕವಾಗಿ ಜಾತಿಗಣತಿಯನ್ನು ಒಪ್ಪಿಕೊಂಡಿದ್ದಾರೆ. ಯಾರ ವಿರೋಧವೂ ಇಲ್ಲ. ವಿರೋಧ ಪಕ್ಷಗಳ ಸುಳ್ಳು ಪ್ರಚಾರದಿಂದಾಗಿ ಕೆಲವರಲ್ಲಿ ನಿರಾಧಾರವಾದ ಸಂಶಯಗಳು ಹುಟ್ಟಿಕೊಂಡಿವೆ, ಇನ್ನು ಕೆಲವರಲ್ಲಿ ತಪ್ಪು ಅಭಿಪ್ರಾಯಗಳಿಂದಾಗಿ ಗೊಂದಲಗಳಿವೆ. ಮಠಾಧೀಶರು ಸೇರಿದಂತೆ ಎಲ್ಲರ ಅನುಮಾನ-ಸಂಶಯಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಂಡು ಜಾತಿ ಗಣತಿ ವರದಿಯನ್ನು ಜಾರಿಗೆ ತರುವ ನಿರ್ಧಾರವನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು.

ಕಾಂತರಾಜ್ ಆಯೋಗ ನಡೆಸಿದ್ದ ಜಾತಿಗಣತಿಯ ವರದಿ ಇಲ್ಲಿಯ ವರೆಗೆ ಬಿಡುಗಡೆಯಾಗಿಲ್ಲ. ನಾನು ಕೂಡಾ ಅದನ್ನು ಓದಿಲ್ಲ. ಹೀಗಿರುವಾಗ ಬಿಜೆಪಿ ಅವರು ವರದಿ ಬಿಡುಗಡೆಯಾಗುವ ಮೊದಲೇ ಅದು ವೈಜ್ಞಾನಿಕವಾಗಿ ನಡೆದಿಲ್ಲ, ಅದರಲ್ಲಿ ತಪ್ಪುಗಳಿವೆ ಎಂದು ಆರೋಪಿಸುತ್ತಿದ್ದಾರೆ. ವರದಿ ಅವರಲ್ಲಿದೆಯೇ? ಯಾವ ಆಧಾರದಲ್ಲಿ ಅವರು ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಸ್ಪಷ್ಟಪಡಿಸಬೇಕು.

ಈಗ ಏಕಾಏಕಿಯಾಗಿ ವರದಿಯನ್ನು ಬಿಡುಗಡೆಗೊಳಿಸುವ ನಿರ್ಧಾರ ಯಾಕೆ ಎಂದು ಆರ್.ಅಶೋಕ್ ಕೇಳುತ್ತಿದ್ದಾರೆ. ಇದೇನು ದಿಡೀರ್ ನಿರ್ಧಾರ ಅಲ್ಲ, ನಮ್ಮ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಇದರ ಬಗ್ಗೆ ಸಮಾಲೋಚನೆ ನಡೆಸುತ್ತಾ ಬಂದಿದ್ದೇವೆ. ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಉಳ್ಳವರು, ಯಾವುದೇ ಚರ್ಚೆ-ಸಂವಾದ ಇಲ್ಲದೆ ದಿಡೀರ್ ನಿರ್ಧಾರ ಕೈಗೊಳ್ಳುವ ಸರ್ವಾಧಿಕಾರಿ ಧೋರಣೆ ನಮ್ಮದ್ದಲ್ಲ. ಸಾರ್ವಜನಿಕ ತೀರ್ಮಾನಗಳನ್ನು ಸಹಮತ ಮೂಡಿಸುವ ಮೂಲಕ ಕೈಗೊಳ್ಳಬೇಕೆಂಬ ಅಭಿಪ್ರಾಯ ನಮ್ಮದಾಗಿದೆ. ಇದರಿಂದಾಗಿ ಸ್ವಲ್ಪ ವಿಳಂಬವಾಗಿದೆ ಅಷ್ಟೆ.

ಜಾತಿಗಣತಿಯನ್ನು ರಾಜಕೀಯ ದಾಳವಾಗಿ ಬಳಸುವುದು ದಲಿತರು ಮತ್ತು ಹಿಂದುಳಿದವರಿಗೆ ಮಾಡುವ ಅವಮಾನವಲ್ಲವೇ ಎಂದು ಅಶೋಕ್ ಅವರು ಅಮಾಯಕರಂತೆ ಪ್ರಶ್ನಿಸಿದ್ದಾರೆ. ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ, ಇದು ಕೇವಲ ಜಾತಿ ಜನಗಣತಿ ಅಲ್ಲ, ಇದು ಸರ್ವರ ಒಳಿತಿಗಾಗಿ ನಡೆಸಲಾದ ರಾಜ್ಯದ ಏಳು ಕೋಟಿ ಜನತೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ. ಇದನ್ನು ಇಲ್ಲಿಯ ವರೆಗೆ ದಲಿತರಾಗಲಿ, ಹಿಂದುಳಿದ ಜಾತಿಯವರಾಗಲಿ ವಿರೋಧಿಸಿಲ್ಲ. ಹೀಗಿರುವಾಗ ಅವರಿಗೆ ಅವಮಾನವಾಗಿದೆ ಎಂದು ಹೇಗೆ ಹೇಳುತ್ತೀರಿ? ಜಾತಿ ಜನಗಣತಿ ವಿರುದ್ಧ ತಳ ಸಮುದಾಯಗಳನ್ನು ಎತ್ತಿಕಟ್ಟುವ ಉದ್ದೇಶ ನಿಮ್ಮದಾಗಿದ್ದರೆ ನಿಮಗೆ ನಿರಾಶೆ ಖಚಿತ.

ಜಾತಿ ಗಣತಿ ನನ್ನ ಕನಸಿನ ಕೂಸು ಎಂದು ಹೇಳಲು ಯಾವ ಹಿಂಜರಿಕೆಯೂ ಇಲ್ಲ. 1992ರಲ್ಲಿ ಸುಪ್ರೀಂ ಕೋರ್ಟ್ ಮಂಡಲ ವರದಿಗೆ ಸಂಬಂಧಿಸಿದಂತೆ ನೀಡಿದ್ದ ಆದೇಶದಲ್ಲಿ ರಾಜ್ಯದಲ್ಲಿ ಶಾಶ್ವತ ಹಿಂದುಳಿದ ಆಯೋಗವನ್ನು ರಚಿಸಿ ಕಾಲಕಾಲಕ್ಕೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಬೇಕು ಎಂದು ಸೂಚಿಸಿತ್ತು. ಇದರಂತೆ 1995ರಲ್ಲಿ ನಾನು ಹಣಕಾಸು ಸಚಿವನಾಗಿದ್ದಾಗ ರಾಜ್ಯದಲ್ಲಿ ಶಾಶ್ವತ ಹಿಂದುಳಿದ ಜಾತಿಗಳ ಆಯೋಗವನ್ನು ರಚಿಸಿದ್ದೆ. 2014ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಸಮಸ್ತ ಜನತೆಯ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಆದೇಶ ನೀಡಿದ್ದೆ. ಇದು ದೇಶದಲ್ಲಿಯೇ ಪ್ರಥಮ ಪ್ರಯತ್ನ ಎಂದು ಹೇಳಲು ನನಗೆ ಹೆಮ್ಮೆಯಿದೆ ಎಂದು ತಿಳಿಸಿದರು.

ಜಾತಿ ಗಣತಿ ಬಗ್ಗೆ ನನ್ನ ಬದ್ಧತೆಯನ್ನು ಪ್ರಶ್ನಿಸುತ್ತಿರುವ ಬಿಜೆಪಿ ಅವರು, ತಮ್ಮ ಪಕ್ಷ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿಯೂ ಜಾತಿಗಣತಿ ನಡೆಸುವ ಧೈರ್ಯವನ್ನು ಯಾಕೆ ಮಾಡಿಲ್ಲ? ಎನ್ನುವ ಪ್ರಶ್ನೆಗೆ ಉತ್ತರಿಸಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಜಾತಿಗಣತಿ ನಡೆಸುವುದನ್ನು ನಮ್ಮ ಪಕ್ಷ ಪ್ರಣಾಳಿಕೆಯಲ್ಲಿ ಸೇರಿಸಿದೆ. ನಮ್ಮ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಮತ್ತೆ ಮತ್ತೆ ಅದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಜಾತಿಗಣತಿ ಬಗ್ಗೆ ತಕರಾರು ಇಲ್ಲದೆ ಇದ್ದರೆ ಪಕ್ಷದ ನಾಯಕರು ಯಾಕೆ ಇದಕ್ಕೆ ಸಹಮತ ವ್ಯಕ್ತಪಡಿಸದೆ ಅವರನ್ನು ಟೀಕಿಸುತ್ತಿದ್ದಾರೆ.

ಮೀಸಲಾತಿ ಬಗ್ಗೆಯಾಗಲಿ, ಒಟ್ಟು ಸಾಮಾಜಿಕ ನ್ಯಾಯದ ಬಗ್ಗೆಯಾಗಲಿ ಭಾರತೀಯ ಜನತಾ ಪಕ್ಷ ಮತ್ತು ಆರ್ ಎಸ್ ಎಸ್ ನಿಲುವು ಏನು ಎನ್ನುವುದನ್ನು ದೇಶದ ಜನತೆ ಅರ್ಥಮಾಡಿಕೊಂಡಿದ್ದಾರೆ. ನೀವು ಯಾವ ವೇಷ ಧರಿಸಿ, ಬಣ್ಣ ಬಳಿದುಕೊಂಡು ಮಾತನಾಡಿದರೂ ನಿಮ್ಮ ಆಂತರ್ಯದ ಅಭಿಪ್ರಾಯ ಏನೆಂಬುದು ಜನರಿಗೆ ತಿಳಿದಿದೆ. ಜಾತಿ ಗಣತಿ ಬಗ್ಗೆ ತಕರಾರು ಇಲ್ಲ ಎಂದು ಹೇಳುತ್ತಿರುವ ಬಿಜೆಪಿ ಅವರೇ, ನೀವು ಇದೇ ಮಾತನ್ನು ಪ್ರಧಾನಿ ಮೋದಿ ಅವರಿಗೆ ಹೇಳಿ ರಾಷ್ಟ್ರಮಟ್ಟದಲ್ಲಿ ಜನಗಣತಿಯ ಜೊತೆಯಲ್ಲಿ ಜಾತಿ ಗಣತಿಯನ್ನೂ ನಡೆಸುವಂತೆ ಒತ್ತಡ ಹೇರಿ, ನಿಮ್ಮ ಬದ್ದತೆ ಮತ್ತು ಸತ್ಯಸಂಧತೆಯನ್ನು ಸಾಬೀತುಪಡಿಸಿ. ಇಲ್ಲದೆ ಇದ್ದರೆ ನೀವು ಕೂಡಾ ಇತ್ತೀಚೆಗೆ ನಿಮ್ಮ ಮೇಲೆ ಬಂದಿರುವ ಆರೋಪಗಳಿಂದ ತಪ್ಪಿಸಿಕೊಳ್ಳಲು ವಿನಾಕಾರಣ ಜಾತಿ ಜನಗಣತಿಯ ವಿವಾದವನ್ನು ಪ್ರಸ್ತಾಪಿಸುತ್ತಿದ್ದೀರಿ ಎಂದು ಆರೋಪಿಸಬೇಕಾಗುತ್ತದೆ ಎಂದು ಸವಾಲು ಹಾಕಿದರು.

ಏತನ್ಮಧ್ಯೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಜಾತಿ ಗಣತಿ ಕುರಿತು ಪಕ್ಷದ ನಿರ್ಧಾರಕ್ಕೆ ತಾವೆಲ್ಲರೂ ಬದ್ಧರಾಗಿದ್ದೇವೆ. ಪಕ್ಷ ಏನು ಹೇಳುತ್ತದೋ ಅದನ್ನು ನಾವು ಅನುಸರಿಸಬೇಕು ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಮಾತನಾಡಿ, ಜಾತಿ ಗಣತಿ ವರದಿ ಜಾರಿಗೆ ತರಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವರದಿಯು ರಾಜ್ಯದಲ್ಲಿ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ದಲಿತರ ಸಹಾಯಕವಾಗಲಿದೆ. ಅವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಹಾಯ ಮಾಡುತ್ತದೆ ಎಂದರು.

ಈ ಹಿಂದೆ ಮಾತನಾಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಅಶೋಕ ಅವರು, ಜಾತಿ ಗಣತಿಗೆ ಬಿಜೆಪಿಯ ವಿರೋಧವಿಲ್ಲ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳಿಗೆ ನೆರವಾಗುವ ಯಾವುದೇ ಕ್ರಮಕ್ಕೆ ಬಿಜೆಪಿ ಬೆಂಬಲ ನೀಡಲಿದೆ. ರಾಜಕೀಯ ಆಟದಲ್ಲಿ ಜಾತಿ ಗಣತಿಯನ್ನು ದಾಳವಾಗಿ ಬಳಸುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದರು.

ಕಾಂಗ್ರೆಸ್ ನಿಜವಾಗಿಯೂ ಜಾತಿ ಗಣತಿಗೆ ಬದ್ಧರಾಗಿದ್ದರೆ, ಅವರು ಕಾಂತರಾಜು ವರದಿಯನ್ನು 2018 ರಲ್ಲಿ ಏಕೆ ಅಂಗೀಕರಿಸಲಿಲ್ಲ ಮತ್ತು ಜಾರಿಗೊಳಿಸಲಿಲ್ಲ? ಅವರು ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಿಳಾ ಮೀಸಲಾತಿ ಮಸೂದೆ ವಿರೋಧಿಸುವವರು ಭಾರಿ ಬೆಲೆ ತೆರಬೇಕಾಗುತ್ತದೆ: ವಿಪಕ್ಷಗಳಿಗೆ ಪ್ರಧಾನಿ ಮೋದಿ ವಾರ್ನಿಂಗ್!

North to South, ಯಾವುದೇ ತಾರತಮ್ಯ, ಅನ್ಯಾಯವಾಗಲ್ಲ: ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಬಗ್ಗೆ ಪ್ರಧಾನಿ ಮೋದಿ ಗ್ಯಾರಂಟಿ!

ಲೋಕಸಭಾ ಕ್ಷೇತ್ರ ಮರು ವಿಂಗಡಣೆ: 'ದಕ್ಷಿಣ ರಾಜ್ಯಗಳಿಗೆ ಇದಕ್ಕಿಂತ ಉತ್ತಮ ಡೀಲ್ ಸಿಗಲು ಸಾಧ್ಯವಿಲ್ಲ'; ತೇಜಸ್ವಿ ಸೂರ್ಯ

ದಾವಣಗೆರೆ ದಂಗಲ್: ಶಾಮನೂರು ವಿರುದ್ಧ ಕ್ರಮ ಯಾಕಿಲ್ಲ? ಒಂದು ಕುಟುಂಬಕ್ಕಾಗಿ ಕಾಂಗ್ರೆಸ್ ಇಡೀ ಅಹಿಂದ ವಿರೋಧ ಕಟ್ಟಿಕೊಳ್ಳುತ್ತಿದೆ!

ಯೋಗೇಶ್ ಗೌಡ ಹತ್ಯೆ ಪ್ರಕರಣ: Congress MLA ವಿನಯ್ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ಶಿಕ್ಷೆ ನಾಳೆ ಪ್ರಕಟ!

SCROLL FOR NEXT